ತಡರಾತ್ರಿ ನಗರದ ರಸ್ತೆ ಗುಂಡಿ ಪರಿಶೀಲನೆ: 5000 ರಸ್ತೆ ಗುಂಡಿಗಳ ಪೈಕಿ 2400 ಮುಚ್ಚಿದ್ದೇವೆಂದ- DCM ಡಿ.ಕೆ ಶಿವಕುಮಾರ್
ಬೆಂಗಳೂರು: ಸೋಮವಾರ ತಡರಾತ್ರಿ ನಗರದ ಕೆಲವು ರಸ್ತೆಗಳನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿದ್ದು, ಈ ವೇಳೆ 5000 ರಸ್ತೆ ಗುಂಡಿಗಳ ಪೈಕಿ 2400 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.
ಮೊದಲಿಗೆ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಗಲೂರು ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ ಡಿ.ಕೆ. ಶಿವಕುಮಾರ್, ಡಾಂಬರು ಹಾಕುವ ಫೇವರ್‌ಯಂತ್ರವನ್ನು ಓಡಿಸುವ ಮೂಲಕ ಡಾಂಬರೀಕರಣ ಕಾರ್ಯ ವೀಕ್ಷಿಸಿದರು.
ಇದೇ ಮಾದರಿಯಲ್ಲಿ ಬೇರೆಡೆಯು ಫೇವರ್ ಯಂತ್ರ ಬಳಸಿ ಗುಣಮಟ್ಟದ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಈಜೀಪುರ ಮೇಲೇತುವೆ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದರು.
ಬಳಿಕ ಈಜಿಪುರ ಸಿಗ್ನಲ್ ಬಳಿ ಮೇಲ್ವೇತುವೆಗೆ ಸೆಪ್ಟೆಂಟ್ ಜೋಡಣೆ ಕಾರ್ಯ ವೀಕ್ಷಿಸಿ, ಮೇಲೇತುವೆ ಕಾಮಗಾರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ಕೂಡಲೇ ಇತ್ಯರ್ಥಗೊಳಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ರಸ್ತೆ ಗುಂಡಿ ಮುಚ್ಚುವ ಸಂದರ್ಭದಲ್ಲಿ ನಿಗದಿತ ಮಾನದಂಡ ಅನುಸರಿಸಬೇಕು. ಪದೇಪದೇ ಗುಂಡಿ ಗಳು ಕಾಣಿಸಿಕೊಳ್ಳುವುದಕ್ಕೆ ಮುಕ್ತಿ ನೀಡಲು ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ 5 ಸಾವಿರಕ್ಕೂ ಹೆಚ್ಚಿನ ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಆದ್ಯತೆ ಮೇರೆಗೆ ಮೊದಲಿಗೆ 4,400 ರಸ್ತೆ ಗುಂಡಿಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 2,400 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.
ರಸ್ತೆಗಳಲ್ಲಿ ಗುಂಡಿ ಹೆಚ್ಚಿರುವ ಕುರಿತಂತೆ ಶಾಸಕರು, ಸಾರ್ವಜನಿ ಕರಿಂದ ದೂರುಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳ ನಿಖರ ಮಾಹಿತಿ ಪಡೆಯಲು ಫಿಕ್ಸ್ ಮೈ ಸ್ಟ್ರೀಟ್ ತಂತ್ರಾಂಶ ಸಿದ್ಧಪಡಿಸಿದ್ದೇವೆ. ಅದರಲ್ಲಿ ಸಾರ್ವಜನಿಕರು ಗುಂಡಿಗಳ ಕುರಿತು ದೂರು ನೀಡುತ್ತಿದ್ದಾರೆ. ಸಾರ್ವಜನಿಕರಿಂದ ಬಂದ ಮಾಹಿತಿ, ಅಧಿಕಾರಿಗಳು ಪತ್ತೆ ಮಾಡಿರುವುದು ಸೇರಿದಂತೆ ಒಟ್ಟಾರೆ ಈವರೆಗೆ 5 ಸಾವಿರಕ್ಕೂ ಹೆಚ್ಚಿನ ಗುಂಡಿಗಳು ಪತ್ತೆಯಾಗಿದ್ದು, ಅದರಲ್ಲಿ ಈಗಾಗಲೇ 2,400 ಗುಂಡಿಮುಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಮಾಡಲಾ ಗುತ್ತಿದೆ. ಈಗಾಗಲೇ ಪಾದಚಾರಿ ಮೇಲೇತು ವೆಗಳನ್ನು ಸ್ವಚ್ಛಗೊಳಿಸಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದಷ್ಟೇ ಅಲ್ಲದೆ, ಗುಣಮಟ್ಟದ ಕೆಲಸ ಆಗಬೇಕು. ಹಾಟ್‌ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಮೂರೂ ಮಾದರಿಯಲ್ಲಿ ರಸ್ತೆ ಗುಂಡಿ ಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಆ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶೇಷ ಆಯುಕ್ತ ಕರೀಗೌಡ ಮತ್ತು ವಲಯ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೋಮಿನ್ ಅವರು ಡಿಕೆ.ಶಿವಕುಮಾರ್ ಅವರ ಜೊತೆಗಿದ್ದರು.


