
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ರೈಲು ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 4 ರೂಪಾಯಿವರೆಗೂ ಹೆಚ್ಚಳ ಮಾಡಲಾಗಿದೆ. ಈ ನಡುವೆ ದೆಹಲಿ ಮೆಟ್ರೋ ದರ ಏರಿಕೆಗೂ ಹಾಗೂ ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೂ ಹೋಲಿಕೆ ಮಾಡುತ್ತಿರುವ ಪ್ರಯಾಣಿಕರು, ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ವರದಿಯನ್ನು ಸಾರ್ವಜನಿಕಗೊಳಿಸಬೇಕೆಂದು ಒತ್ತಾಯಿಸುತ್ತಿರುವ ಪ್ರಯಾಣಿಕರು, ನಮ್ಮ ಮೆಟ್ರೋ ದರಗಳನ್ನು ಪರಿಷ್ಕರಣೆ ಮಾಡುವಂತೆ ಆಗ್ರಹಿಸಿದ್ದಾರೆ.
ದೆಹಲಿ ಮೆಟ್ರೋ ಬರೋಬ್ಬರಿ 395 ಕಿಲೋ ಮೀಟರ್ ವಿಸ್ತಾರ ಜಾಲ ಹೊಂದಿದ್ದರೂ ಪ್ರಯಾಣಿಕರಿಗೆ ಹೊರೆ ಆಗದಂತೆ ದರವನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಆದರೆ, ಕೇವಲ 96 ಕಿಲೋ ಮೀಟರ್ ಜಾಲ ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMTCL) ಪ್ರಯಾಣಿಕರಿಗೆ ಹೊರೆ ಆಗುವಂತೆ ದುಪ್ಪಟ್ಟು ರೀತಿಯಲ್ಲಿ ಟಿಕೆಟ್ ಬೆಲೆ ಏರಿಕೆ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ನಮ್ಮ ಮೆಟ್ರೋ ನಿಯಮಿತ ಪ್ರಯಾಣಿಕರಾಗಿರುವ ಜಯನಗರದ ಶಿಕ್ಷಕ ಜಾನ್ ಎಂಬುವವರು ಮಾತನಾಡಿ, ರೈಲುಗಳ ಆವರ್ತನ, ಜನದಟ್ಟಣೆ, ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕದ ಕೊರತೆಯ ಬಗ್ಗೆ ನಿರಂತರ ದೂರುಗಳಿದ್ದರೂ ಕೂಡ ನಮ್ಮ ಮೆಟ್ರೋ ದೇಶದ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿದೆ. ಸಾರ್ವಜನಿಕರ ಹೊರೆಯಾಗದಂತೆ ದರವನ್ನು ಪರಿಷ್ಕರಿಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
ಮಾಲ್ ಒಂದರ ಅಂಗಡಿ ವ್ಯವಸ್ಥಾಪಕರಾಗಿರುವ ಮತ್ತೊಬ್ಬ ಪ್ರಯಾಣಿಕ ಪ್ರಜ್ವಲ್ ಅವರು ಮಾತನಾಡಿ, ದೆಹಲಿ ಮೆಟ್ರೋ ತನ್ನ ದರಗಳನ್ನು ನಿರ್ವಹಿಸಬಹುದಾದರೆ, ಬೆಂಗಳೂರಿನ ನಮ್ಮ ಮೆಟ್ರೋಗೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ದರ ಸಮಿತಿ ವರದಿಯನ್ನೇಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಎಂಆರ್‌ಸಿಎಲ್ ಏನನ್ನು ಬಚ್ಚಿಡುತ್ತಿದೆ. ದರ ನಿಗದಿ ಸಮಿತಿಯ ವರದಿ ಇದೆಯೋ? ಇಲ್ಲವೋ ಎಂಬ ಅನುಮಾನ ಕೂಡ ಮೂಡುತ್ತಿದೆ ಎಂದು ಹೇಳಿದ್ದಾರೆ.
ದೆಹಲಿ ಮೆಟ್ರೋ 395 ಕಿಲೋ ಮೀಟರ್ ವಿಸ್ತಾರ ಜಾಲ ಹೊಂದಿದ್ದರೂ ಗರಿಷ್ಟ ಟಿಕೆಟ್ ದರ 64 ರೂ. ಇದೆ. ಬೆಂಗಳೂರು ಮೆಟ್ರೋ ಕೇವಲ 96 ಕಿಮೀ ಜಾಲ ಹೊಂದಿದ್ದು, ಗರಿಷ್ಠ ದರ 90 ರೂ. ವಿಧಿಸಿದೆ. ಈ ದರವನ್ನು ನಿಗದಿಪಡಿಸುವುದರ ಹಿಂದಿನ ತರ್ಕವೇನಿದೆ? ಬಿಎಂಆರ್‌ಸಿಎಲ್ ಮೆಟ್ರೋ ಬೋಗಿಗಳಲ್ಲಿ ರೆಕ್ಲೈನರ್ ಸೀಟುಗಳನ್ನು ನೀಡಲು ತೆರಿಗೆಯಾಗಿ 90 ರೂ. ವಿಧಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
Advertisement