
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮಗ ವಿನೀಶ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ, ಅಶ್ಲೀಲ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮಹಿಳಾ ಆಯೋಗವು ಪತ್ರ ಬರೆದಿದೆ.
ಆಯೋಗಕ್ಕೆ ಬಂದ ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಸೂಚಿಸಿದೆ.
ನೆಲಮಂಗಲದ ಭಾಸ್ಕರ್ ಪ್ರಸಾದ್ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ‘ವಿಜಯಲಕ್ಷ್ಮೀ ದರ್ಶನ್ ಹಾಗೂ ಅವರ ಮಗ ವಿನೀಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೋಸ್ಟ್ ಮಾಡಲಾಗುತ್ತಿದೆ.
ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಿ ನ್ಯಾಯ ಹಾಗೂ ರಕ್ಷಣೆ ಒದಗಿಸಿ’ ಎಂದು ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಅವರು, 'ಅರ್ಜಿದಾರರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ 15 ದಿನಗಳ ಓಳಗಾಗಿ ಸಲ್ಲಿಸುವಂತೆ ಕೋರಿದೆ ಎಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ನಟಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿದವರ ವಿರುದ್ಧವೂ ಕ್ರಮ ಕೈಕೊಳ್ಳುವಂತೆ ಮಹಿಳಾ ಆಯೋಗ ಪತ್ರ ಬರೆದಿತ್ತು. ಎಲ್ಲರ ಕೈಯಲ್ಲೂ ಸೋಶಿಯಲ್ ಮೀಡಿಯಾ ಇದೆ. ನಕಲಿ ಅಕೌಂಟ್‌ಗಳ ಮೂಲಕ ಕಮೆಂಟ್ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಅಂಥವರಿಂದ ಅಸಭ್ಯವಾದ ಮತ್ತು ಅಶ್ಲೀಲವಾದ ಕಮೆಂಟ್‌ಗಳು ಬರುತ್ತಿವೆ. ಕಿಡಿಗೇಡಿಗಳಿಗೆ ಬುದ್ಧಿ ಕಲಿಸಲು ಮಹಿಳೆಯರು ಮುಂದಾಗಿದ್ದಾರೆ. ರಮ್ಯಾ ಅವರು ದೂರು ನೀಡಿದ ಬಳಿಕ ಕೆಲವರನ್ನು ಬಂಧಿಸಲಾಯಿತು.
Advertisement