

ಬೆಂಗಳೂರು: ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದ್ದು, ಇದಕ್ಕಾಗಿ 4,800 ಕೋಟಿ ರೂ.ಗಳ ಅನುದಾನವನ್ನು ಮೀಸಲಿಟ್ಟಿದೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳ ಅಭಿವೃದ್ದಿಗೆ ಪ್ರಸ್ತುತ 4,808 ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, ಮಳೆಗಾಲ ಆರಂಭಕ್ಕೂ ಮೊದಲು ವೈಟ್ ಟಾಪಿಂಗ್ ಕಾಮಗಾರಿ ಹೊರತು ಪಡಿಸಿ ಉಳಿದೆಲ್ಲ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ 1682 ಕಿ.ಮೀ ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿದ್ದು, ಈ ಪೈಕಿ ಈಗಾಗಲೇ 124 ಕಿ.ಮೀ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೀಗ, 1700 ಕೋಟಿ ರು. ವೆಚ್ಚದಲ್ಲಿ 157 ಕಿ.ಮೀ ಉದ್ದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. 694 ಕೋಟಿ ರು. ವೆಚ್ಚದಲ್ಲಿ 392 ಕಿ.ಮೀ ಉದ್ದದ ರಸ್ತೆ ಡಾಂಬರೀಕರಣ ಪ್ರಗತಿಯಲ್ಲಿದೆ. 1,241 ಕೋಟಿ ರು.ವೆಚ್ಚದಲ್ಲಿ ಡಾಂಬರೀಕರಣಕ್ಕೆ, ಮುಖ್ಯಮಂತ್ರಿಯ ಅನುದಾನದಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ರಸ್ತೆಗಳಿಗೆ ಡಾಂಬರೀಕರಣ ನಿರ್ಧರಿಸಲಾಗಿದೆ.
ಇನ್ನು ಐಟಿ- ಬಿಟಿ ಕಂಪನಿಗಳಿರುವ ಹೈಡೆನ್ಸಿಟಿ ಕಾರಿಡಾರ್‌ನ 78 ಕಿ.ಮೀ ಅಭಿವೃದ್ಧಿಗೆ 273 ಕೋಟಿ ರು. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ನಗರದಲ್ಲಿ ಅಸ್ತಿತ್ವದಲ್ಲಿರುವ ರಸ್ತೆಗಳ ಅಭಿವೃದ್ಧಿಗೆ 4,808 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಡಾಂಬರೀಕರಣ ಕಾಮಗಾರಿಗಳು ಮುಂಬರುವ ಮಾರ್ಚ್, ಏಪ್ರಿಲ್‌ಗಿಂತ ಮೊದಲು ಪೂರ್ಣಗೊಳಿಸಲಾಗುವುದು. ವೈಟ್ ಟಾಪಿಂಗ್ ಕಾಮಗಾರಿಯ ಪೈಕಿ ಈಗಾಗಲೇ ಸುಮಾರು 34 ಕಿ.ಮೀ ಉದ್ದದರಸ್ತೆಯಲ್ಲಿ ಕಾಮಗಾರಿ ಮುಗಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. 30 ಕಿ.ಮೀ ಉದ್ದದ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟಾರೆ, 2026ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಹೆಬ್ಬಾಳ ಜಂಕ್ಷನ್‌ನಿಂದ ಪಶು ವೈದ್ಯಕೀಯ ಕಾಲೇಜುವರೆಗೂ ವಾಹನ ದಟ್ಟಣೆ ಕಡಿಮೆ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಕೆಳ ಮಾರ್ಗ (ಅಂಡರ್‌ಪಾಸ್) ವನ್ನು 'ಕಟ್ ಆ್ಯಂಡ್ ಕವರ್' ಮಾದರಿಯಲ್ಲಿ ನಿರ್ಮಿಸಲಾಗುವುದು. 2215 ಕೋಟಿ ರು. ವೆಚ್ಚಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಲಿದೆ. ಸುರಂಗ ರಸ್ತೆ ಹಾಗೂ ಮೇ ವೃತ್ತದಲ್ಲಿ ಫೈಓವರ್ ನಿರ್ಮಾಣ ಮಾಡಲಿದೆ. ಮುಂದಿನ ವರ್ಷದ ಜನವರಿಯಲ್ಲಿ ಬಿಡಿಎ ವತಿಯಿಂದ ಟೆಂಡರ್ ಕರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಅತಿ ಹೆಚ್ಚು ವಾಹನ ಸಂಚಾರವಿರುವ ಎಂ.ಜಿ.ರಸ್ತೆಯನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಸಂಚಾರದಟ್ಟಣೆ ಹೆಚ್ಚಾಗಿರುವುದರಿಂದ ಸಂಚಾರಿ ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ಡಾಂಬರೀಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ನಗರದಾದ್ಯಂತ ರಸ್ತೆ ಗುಂಡಿಗಳನ್ನು ಯುದ್ದೋ ಪಾದಿಯಲ್ಲಿ ಮುಚ್ಚಲಾಗುತ್ತಿದ್ದು, ಈವರೆಗೆ 22,539 ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ನಿರಂತರವಾಗಿ ಬಂದ ಪರಿಣಾಮ ತಡವಾ ಗಿದ್ದು, ಮುಂದಿನ ವರ್ಷ ರಸ್ತೆ ಗುಂಡಿಗಳನ್ನು ನಿಯಂತ್ರಿಸಲು ದೀರ್ಘಕಾಲಿಕ ಯೋಜನೆ ಗಳನ್ನು ರೂಪಿಸಲಾಗುತ್ತಿದೆ ಎಂದರು.
ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಮಾತನಾಡಿ, 46 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಬಾಡಿಗೆಗೆ ಪಡೆಯುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
Advertisement