

ಬೆಂಗಳೂರು: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಿಂದ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ಘಟನೆ ನಗರದ ಗೋವಿಂದ ರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಂಚಮಶೀಲನಗರದ ಮನೆಯೊಂದರಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಹಾಗೂ ಮಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರನ್ನು ಚಾಂದಿನಿ (30) ಹಾಗೂ ಮಗಳು ಯುವಿ ಕಿರಣ್ (4) ಎಂದು ಗುರುತಿಸಲಾಗಿದೆ. ಚಾಂದಿನಿ ಅವರ ಪತಿ ಕಿರಣ್ ಅವರು ಕಾರ್ಪೆಂಟರ್ ಆಗಿದ್ದು, ಕೆಲಸಕ್ಕೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಶಾಲೆಗೆ ತೆರಳಿದ್ದ ಮೊದಲ ಪುತ್ರಿಯನ್ನು ಕಿರಣ್ ಅವರ ಸಹೋದರ ಸೋಮವಾರ ಮಧ್ಯಾಹ್ನ ಮನೆಗೆ ಕರೆದುಕೊಂಡು ಬಂದಿದ್ದರು. ಬಾಗಿಲು ಬಡಿದರೂ ತೆರೆದಿರಲಿಲ್ಲ. ಬಳಿಕ ಬಾಗಿಲು ಒಡೆದು ಪರಿಶೀಲಿಸಿದಾಗ ಸ್ನಾನದ ಕೊಠಡಿಯಲ್ಲಿ ಅಸ್ವಸ್ಥರಾಗಿ ತಾಯಿ ಹಾಗೂ ಮಗಳು ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement