

ಬೆಂಗಳೂರು: ನಗರದಲ್ಲಿ ನಿನ್ನೆ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ನಗರದ ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆ ಬಳಿ ಸಂಭವಿಸಿದ ಭೀಕರ ಟ್ರಕ್ ಅಪಘಾತದಲ್ಲಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಲಲಿತಮ್ಮ ಎಂದು ಗುರುತಿಸಲಾಗಿದೆ. ಇವರು ಮಾಧ್ಯಮ ಕಚೇರಿಯಲ್ಲಿ ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಲಲಿತಮ್ಮ ಅವರು ಸಂಜೆ ತಮ್ಮ ಕೆಲಸವನ್ನು ಮುಗಿಸಿಕೊಂಡು, ಎಂದಿನಂತೆ ಮನೆಗೆ ಹಿಂದಿರುಗಲು ರಸ್ತೆ ದಾಟುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ.
ಓಕಳೀಪುರಂ ರೈಲ್ವೇ ಪ್ಯಾರಲೆಲ್ ರಸ್ತೆಯಲ್ಲಿ ಅತೀ ವೇಗದಿಂದ ಬಂದ ಟ್ರಕ್ ಒಂದು ರಸ್ತೆ ದಾಟುತ್ತಿದ್ದ ಲಲಿತಮ್ಮ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಲಿತಮ್ಮ ಅವರು ಕೆಳಗೆ ಬಿದ್ದಿದ್ದು, ತಕ್ಷಣವೇ ಟ್ರಕ್‌ನ ಚಕ್ರ ಅವರ ತಲೆಯ ಮೇಲೆ ಹರಿದು ಹೋಗಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿದ್ದಾರೆ.
ಹೊಸಕೆರೆಹಳ್ಳಿ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ನಿನ್ನೆ ಶುಕ್ರವಾರ ಸಂಜೆ ನಡೆದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟವೆ ನಡೆದಿದೆ.
ಅಪರಿಚಿತ ವಾಹನ ಮಹಿಳಾ ಕಾರ್ಮಿಕರಿಗೆ ಡಿಕ್ಕಿ ಹೊಡೆದು, ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮೃತರನ್ನು ಯಾದಗಿರಿ ಮೂಲದ ರಂಗಮ್ಮ (45ವ) ಹಾಗೂ ಚೌಡಮ್ಮ (55ವ) ಎಂದು ಗುರುತಿಸಲಾಗಿದೆ. ದಿನಗೂಲಿ ಕಾರ್ಮಿಕರಾಗಿದ್ದ ಇವರು ನೈಸ್ ರಸ್ತೆ ಬದಿಯಲ್ಲಿ ಹುಲ್ಲು ತೆರವು ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಸಂಜೆ ಸುಮಾರು 5:54ರ ವೇಳೆಗೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಇಬ್ಬರೂ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕೆಂಗೇರಿ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Advertisement