

ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಆರ್ ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪುಂಡರ ಗ್ಯಾಂಗ್ ರೈಲಿನೊಳಗೆ ಎಳೆದೊಯ್ದ ಘಟನೆ ನಡೆದಿದೆ.
ಸೋಮವಾರ ಯಶವಂತಪುರ ರೈಲು ನಿಲ್ದಾಣದಲ್ಲಿ ಗೋವಾಕ್ಕೆ ಹೋಗುವ ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲಿನ ಚೈನ್ ಅನ್ನು ಪದೇ ಪದೇ ಎಳೆದು, ಮದ್ಯದ ಅಮಲಿನಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವ ಮೂಲಕ ಗಲಾಟೆ ಸೃಷ್ಟಿಸಿದ ಮೂವರು ವ್ಯಕ್ತಿಗಳನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ.
ಕುಡಿದ ನಶೆಯಲ್ಲಿ ಪದೇ ಪದೇ ಚೈನ್ ಎಳೆದು ಕೆಲ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಚೈನ್ ಎಳೆದಿದ್ದನ್ನು ಪ್ರಶ್ನೆ ಮಾಡಿದ್ದ ಆರ್‌ಪಿಎಫ್ ಸಿಬ್ಬಂದಿ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 17309 ಹೊರಡುವ ಸಮಯದಲ್ಲಿ, ಎಸ್ 3 ಕೋಚ್‌ನಲ್ಲಿ ಪುಂಡರ ಗ್ಯಾಂಗ್ ಚೈನ್ ಎಳೆಯುತ್ತಿರುವುದು ಕಂಡುಬಂದಿದೆ.
ಈ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ನಿಯೋಜಿಸಲಾದ ಆರ್‌ಪಿಎಫ್ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಲು ಕೋಚ್‌ಗೆ ಧಾವಿಸಿದರು. ವಿಚಾರಣೆಯ ಸಮಯದಲ್ಲಿ, ಒಟ್ಟಿಗೆ ಪ್ರಯಾಣಿಸುತ್ತಿದ್ದ 14 ಪ್ರಯಾಣಿಕರ ಗುಂಪು ಆರ್ ಪಿಎಫ್ ಸಿಬ್ಬಂದಿ ಮೇಲೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಮೂಲಗಳ ಪ್ರಕಾರ 14 ಜನರ ಯುವಕರ ಗುಂಪೊಂದು ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲಿನ ಚೈನ್ ಅನ್ನು ಪದೇ ಪದೇ ಎಳೆದು ರೈಲು ನಿಲ್ಲಿಸುತ್ತಿದ್ದರು. ತಮ್ಮಗುಂಪಿನ ಸದಸ್ಯರೊಬ್ಬರು ರೈಲು ಇಳಿದು ಹೋಗಿದ್ದ ಸಂದರ್ಭದಲ್ಲೇ ರೈಲು ಚಲಿಸಲು ಆರಂಭಿಸಿತ್ತು.
ಹೀಗಾಗಿ ಮದ್ಯದ ಅಮಲಿನಲ್ಲಿದ್ದ ಪುಂಡರ ಗ್ಯಾಂಗ್ ಪದೇ ಪದೇ ಚೈನ್ ಎಳೆದು ರೈಲು ನಿಲ್ಲಿಸಲು ಯತ್ನಿಸುತ್ತಿದ್ದರು. ಈ ಬಗ್ಗೆ ಸಹ ಪ್ರಯಾಣಿಕರು ರೈಲ್ವೇ ಸುರಕ್ಷತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಆರ್ ಪಿಎಫ್ ಸಿಬ್ಬಂದಿ ಈ ಕುರಿತು ಯುವಕರನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಉದ್ಧಟತನದ ಉತ್ತರ ನೀಡಿದ ಪುಂಡರು ಆರ್ ಪಿಎಫ್ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಆರ್ ಪಿಎಫ್ ಸಿಬ್ಬಂದಿಯನ್ನು ರೈಲಿನೊಳಗೆ ಎಳೆದೊಯ್ದ ಘಟನೆ ಕೂಡ ನಡೆದಿದೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಹೆಚ್ಚುವರಿ ಆರ್‌ಪಿಎಫ್ ಸಿಬ್ಬಂದಿಯ ಸಹಾಯದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಮೂವರ ಬಂಧನ
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಗುಂಪಿನ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ರೈಲು ತಡೆದು ಹಲ್ಲೆ ಆರೋಪದಡಿ ಯಶವಂತಪುರ ರೈಲ್ವೆ ಠಾಣೆಯಲ್ಲಿ RPF ಸಿಬ್ಬಂದಿಯಿಂದ ಮೂವರ ವಿರುದ್ಧ ದೂರು ನೀಡಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು, ಚೈನ್ ಎಳೆದಿದ್ದ ಪುಂಡರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಗುಂಪಿನ ಉಳಿದ ಸದಸ್ಯರನ್ನು ಸಹ ಬಂಧಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ರೈಲು ಹೊರಡುವಲ್ಲಿ ಸುಮಾರು 10 ನಿಮಿಷಗಳ ವಿಳಂಬವಾಯಿತು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಆದಾಗ್ಯೂ, ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ತಕ್ಷಣ ನಿಯೋಜಿಸಲಾಗಿದ್ದರಿಂದ ಮತ್ತು ರೈಲು ಶೀಘ್ರದಲ್ಲೇ ಸುರಕ್ಷಿತವಾಗಿ ಹೊರಟಿದ್ದರಿಂದ ನಿಲ್ದಾಣದಲ್ಲಿ ಯಾವುದೇ ಜನಸಂದಣಿ ಅಥವಾ ಭಯಭೀತತೆ ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement