

ರಾಮನಗರ: 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಅಲ್ಲದೆ ಅದನ್ನು ಚಿತ್ರೀಕರಿಸಿಕೊಂಡು ನಂತರ ಬ್ಲಾಕ್‌ಮೇಲ್ ಮಾಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ಟೋಬರ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿರುವ ಆರೋಪಿಯೊಬ್ಬನ ಒಬ್ಬನ ಮನೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು.
ಬಂಧಿತ ಮೂವರು ಆರೋಪಿಗಳನ್ನು ವಿಕಾಸ್, ಪ್ರಶಾಂತ್ ಮತ್ತು ಚೇತನ್ ಎಂದು ಗುರುತಿಸಲಾಗಿದೆ. ಇಬ್ಬರು ಕಾಲೇಜು ವಿದ್ಯಾರ್ಥಿಗಳಾಗಿದ್ದರೆ, ಮೂರನೆಯವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಎಂದು ಪೊಲೀಸರು ತಿಳಿಸಿದ್ದಾರೆ. ಆರು ತಿಂಗಳ ಹಿಂದೆ ಪ್ರಮುಖ ಆರೋಪಿ ವಿಕಾಸ್ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದನು. ನಂತರ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಮದುವೆಯಾಗುವ ಭರವಸೆ ನೀಡಿ ವಿಕಾಸ್ ವಿದ್ಯಾರ್ಥಿನಿ ಜೊತೆ ದೇಹ ಸಂಪರ್ಕ ಬೆಳೆಸಿದ್ದನು. ತಮ್ಮ ಖಾಸಗಿ ಕ್ಷಣಗಳನ್ನು ವಿಕಾಸ್ ಯುವತಿಗೆ ತಿಳಿಯದಂತೆ ತನ್ನ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಈ ವಿಡಿಯೋವನ್ನು ಸಹ ಆರೋಪಿಗಳಾಗಿರುವ ತನ್ನ ಸ್ನೇಹಿತರಿಗೆ ತೋರಿಸಿದನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಕಾಸ್, ಯುವತಿಗೆ ಖಾಸಗಿ ಕ್ಷಣದ ವಿಡಿಯೋ ಕಳುಹಿಸಿ ಬ್ಲಾಕ್ ಮೇಲ್ ಮಾಡಿ ತಾನು ಕರೆದಾಗಲೆಲ್ಲಾ ರೂಂಮಿಗೆ ಬರಬೇಕು ಎಂದು ಬೆದರಿಸಿದ್ದನು. ಅದರಂತೆ ಅಕ್ಟೋಬರ್‌ನಲ್ಲಿ ರೂಮಿಗೆ ಕರೆಸಿಕೊಂಡ ವಿಕಾಸ್ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ಇತರ ಇಬ್ಬರು ಆರೋಪಿಗಳೊಂದಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದು ಅದನ್ನು ಸಹ ಆರೋಪಿಗಳು ರೆಕಾರ್ಡ್ ಮಾಡಿಕೊಂಡಿದ್ದರು. ನಂತರ ಆರೋಪಿಗಳಿಂದ ಕಿರುಕುಳ ಹೆಚ್ಚಾಗಿದ್ದರಿಂದ ನೊಂದ ಯುವತಿ ತನ್ನ ಪೋಷಕರಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದಳು.
ಆಕೆಯ ದೂರಿನ ಆಧಾರದ ಮೇಲೆ, ಡಿಸೆಂಬರ್ 17ರಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64 (ಅತ್ಯಾಚಾರ), 70 (ಸಾಮೂಹಿಕ ಅತ್ಯಾಚಾರ) ಮತ್ತು 71 (ಪುನರಾವರ್ತಿತ ಅಪರಾಧಿಗಳಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement