

ಆನೇಕಲ್: ವಿವಿಧ ಸ್ಥಳಗಳಲ್ಲಿ 6ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಪಾನಮತ್ತ ಚಾಲಕನೊಬ್ಬನನ್ನು 10 ಕಿ.ಮೀ.ವರೆಗೂ ಬೆನ್ನಟ್ಟಿ ಹಿಡಿದ ಪೊಲೀಸರ, ನಂತರ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆನೇಕಲ್ ತಾಲ್ಲೂಕಿನ ಚಂದಾಪುರ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಪ್ರೇಮ್ (25) ಟ್ರಕ್ ಚಲಾಯಿಸುತ್ತಿದ್ದ ಚಾಲಕನಾಗಿದ್ದಾನೆ. ಉತ್ತರ ಪ್ರದೇಶ ನೋಂದಣಿಯ ಟ್ರಕ್ ಅತ್ತಿಬೆಲೆ ಗೋದಾಮಿನಿಂದ ಚಂದಾಪುರ ಕಡೆಗೆ ಹೋಗುತ್ತಿತ್ತು. ಮದ್ಯದ ಅಮಲಿನಲ್ಲಿದ್ದ ಚಾಲಕ ಮೊದಲು ಆನೇಕಲ್‌ನಲ್ಲಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಇಭ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಲ್ಲಿಂದ ಪರಾರಿಯಾಗಿರುವ ಚಾಲಕ ನಂತರ, ಸೂರ್ಯ ನಗರದಲ್ಲಿ ಮೂರು ವಾಹನಗಳು ಮತ್ತು ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಬಳಿಕ ಸ್ಥಳೀದಲ್ಲಿದ್ದ ವಾಹನ ಚಾಲಕರು, ಟ್ರಕ್ ಚಾಲಕನನ್ನು ಸುಮಾರು 10 ಕಿ.ಮೀವರೆಗೂ ಬೆನ್ನತ್ತಿದ್ದು, ನಂತರ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ.
ನಂತರ ಪೊಲೀಸರು ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಾಗಿದ್ದು, ಗಾಯಗೊಂಡ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement