ಹುಬ್ಬಳ್ಳಿ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕೋಪಗೊಂಡು ತನ್ನ ಮಗಳ ಮೇಲೆಯೇ ತಂದೆ ಹಲ್ಲೆ ನಡೆಸಿದ್ದು, ಗರ್ಭಿಣಿಯಾಗಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಸಂಜೆ ನಡೆದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪೈಪ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಹಲ್ಲೆ ನಡೆಸಲಾಗಿದ್ದು, ಸುಮಾರು 20 ವರ್ಷ ವಯಸ್ಸಿನ ಮಹಿಳೆ ಭಾನುವಾರ ರಾತ್ರಿ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದರು.
ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಇನಾಂ-ವೀರಾಪುರದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಮೃತ ಮಹಿಳೆ ಮೇ ತಿಂಗಳಲ್ಲಿ ತನ್ನ ಕುಟುಂಬದ ವಿರೋಧದ ಹೊರತಾಗಿಯೂ, ತನ್ನ ಗ್ರಾಮದ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದರು ಮತ್ತು ದಂಪತಿ ಜೀವ ಭಯದಿಂದ ಹಾವೇರಿಯಲ್ಲಿ ವಾಸಿಸುತ್ತಿದ್ದರು. ಅವರು ಈ ತಿಂಗಳ ಆರಂಭದಲ್ಲಿ ಗ್ರಾಮಕ್ಕೆ ಮರಳಿದ್ದರು.
ಭಾನುವಾರ ಮಹಿಳೆಯ ಕುಟುಂಬ ಸದಸ್ಯರು ಆಕೆಯ ಪತಿ ಮತ್ತು ಮಾವ ತಮ್ಮ ಕೃಷಿ ಭೂಮಿಯಲ್ಲಿದ್ದಾಗ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಪರಾರಿಯಾಗಿದ್ದಾರೆ. ನಂತರ ಸಂತ್ರಸ್ತೆಯ ಮನೆಗೆ ನುಗ್ಗಿ ಆಕೆಯ ಮೇಲೆ, ಮತ್ತೊಬ್ಬ ಮಹಿಳೆ ಮತ್ತು ಅಲ್ಲಿದ್ದ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಆರು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement