

ಬೆಂಗಳೂರು: ಟೆಲಿಗ್ರಾಂ ಗ್ರೂಪ್‌ನಲ್ಲಿ ಸಂಪರ್ಕಿಸಿದ ಕಾಲ್ ಗರ್ಲ್‌ಗಳು ಕರೆದ ಸ್ಥಳಕ್ಕೆ ತೆರಳಿದ 30 ವರ್ಷದ ಯುವಕನೊಬ್ಬ ಅಪಾರ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದಾರೆ. 20 ದಿನಗಳಲ್ಲಿ ಎರಡು ಬಾರಿ ಹೋದವನಿಂದ ಸುಮಾರು 40,000 ದೋಚಿದ್ದಾರೆ.
ಅಷ್ಟೇ ಅಲ್ಲದೇ 1 ಲಕ್ಷ ರೂ. ಹಣ ಕೊಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಡಿಸೆಂಬರ್ 1 ರಂದು ಅನ್ನಪೂರ್ಣೇಶ್ವರಿ ನಗರದಲ್ಲಿ ಮೊದಲ ಘಟನೆ ನಡೆದಿದೆ. ಎರಡನೇ ಘಟನೆ ಶನಿವಾರ ನಡೆದಿದೆ.
ಈ ಸಂಬಂಧ ವಿಲ್ಸನ್ ಗಾರ್ಡನ್‌ನ ಸುಧಾಮನಗರ ನಿವಾಸಿಯಾಗಿರುವ ಯುವಕ ಶನಿವಾರ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಎರಡೂ ಘಟನೆಗಳಲ್ಲಿ ಒಬ್ಬಳೇ ಮಹಿಳೆ ಭಾಗಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
'ಟೆಲಿಗ್ರಾಂ ಗ್ರೂಪ್' ನಲ್ಲಿದ್ದ ಮಹಿಳೆ! ಡಿಸೆಂಬರ್ 1 ರಂದು ಟೆಲಿಗ್ರಾಂ ಗ್ರೂಪ್‌ನಲ್ಲಿ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದ ಸಂತ್ರಸ್ತ ಯುವಕ 20,000 ರೂಪಾಯಿ ನೀಡಲು ಒಪ್ಪಿದ್ದಾರೆ. ಬಳಿಕ ಲೋಕೇಷನ್ ಕಳುಹಿಸಿದ ನಂತರ ಅನ್ನಪೂರ್ಣೇಶ್ವರಿ ನಗರಕ್ಕೆ ಹೋಗಿದ್ದಾರೆ. ಆತನನ್ನು ಮನೆಯೊಳಗೆ ಕರೆದುಕೊಂಡು ಹೋದ ಮಹಿಳೆ, ಆತನ ಬಟ್ಟೆ ಬಿಚ್ಚುವ ನೆಪದಲ್ಲಿ ಹಣವನ್ನು ದೋಚಿದ್ದಾಳೆ. ಅಲ್ಲದೆ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ತನ್ನ ಸಹಚರರನ್ನು ಕರೆಸಿ ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಆತ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ.
ಯುವಕನಿಗೆ ಹಲ್ಲೆ, ಕಿಡ್ನಾಪ್ ಮಾಡಲು ಯತ್ನ: ಇದೇ ಯುವಕ 'ಸ್ವೀಟಿ' ಎಂಬ ಮತ್ತೋರ್ವ ಮಹಿಳೆಯನ್ನು ಭೇಟಿಯಾಗಿದ್ದಾನೆ. ಆಕೆ ಕಳುಹಿಸಿದ ರಾಜರಾಜೇಶ್ವರಿ ನಗರ ಲೋಕೇಷನ್ ಗೆ ಹೋದಾಗ, ಐವರು ಆರೋಪಿಗಳು ಆತನಿಂದ ಮತ್ತೆ 20,000 ದೋಚಿದ್ದಾರೆ. ಅಲ್ಲದೇ 1 ಲಕ್ಷ ಕೊಡದಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿ ಆತನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸುತ್ತಿದ್ದಾಗ ಕಾಪಾಡಿ ಎಂದು ಕೂಗಿ ಕಿರುಚಿಕೊಂಡಿದ್ದಾನೆ.
ತಕ್ಷಣ ದಾರಿಹೋಕರೊಬ್ಬರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ತಕ್ಷಣ ಪೊಲೀಸರು ಆ ಸ್ಥಳಕ್ಕೆ ದೌಡಾಯಿಸಿದ್ದು, ಗ್ಯಾಂಗ್ ಸದಸ್ಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
Advertisement