

ಬೆಂಗಳೂರು: ತನ್ನೊಂದಿಗೆ ಸಂಬಂಧ ಬೆಳೆಸುವಂತೆ ನಿರಂತರವಾಗಿ ಒತ್ತಡ ಹೇರಿದ ವ್ಯಕ್ತಿಯೊಬ್ಬ 21 ವರ್ಷದ ಮಹಿಳೆ ಮೇಲೆ ಹಾಡಹಗಲೇ ಹಲ್ಲೆ ನಡೆಸಿ, ಕಿರುಕುಳ ನೀಡಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಡಿಸೆಂಬರ್ 22 ರಂದು ಮಧ್ಯಾಹ್ನ 3.20ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಕೂಟರ್ ಪಕ್ಕದಲ್ಲಿ ಮಹಿಳೆ ನಿಂತಿದ್ದಾಗ ಆರೋಪಿ ಕಾರಿನಲ್ಲಿ ಅಲ್ಲಿಗೆ ಬರುತ್ತಾನೆ. ಬಂದ ಕೂಡಲೇ ಆಕೆಯ ಪರ್ಸ್ ತೆಗೆದುಕೊಂಡು ಅದನ್ನು ಪರಿಶೀಲಿಸುತ್ತಾನೆ. ಬಳಿಕ ಅದನ್ನು ಎಸೆದು ಆಕೆಯನ್ನು ಹಿಂದಿನಿಂದ ಹಿಡಿದುಕೊಳ್ಳುತ್ತಾನೆ. ಇದೇ ವೇಳೆಗೆ ಎದುರಿನಿಂದ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮೂಕಪ್ರೇಕ್ಷಕರಾಗಿ ಅದನ್ನು ನೋಡುತ್ತಿರುವುದು ಸೆರೆಯಾಗಿದೆ.
ನಂತರ ಆ ವ್ಯಕ್ತಿ ಮಹಿಳೆಯ ತಲೆ ಮತ್ತು ಬೆನ್ನಿಗೆ ಪದೇ ಪದೇ ಹೊಡೆದು ಎಳೆದುದಾಡುತ್ತಾನೆ. ಬಳಿಕ ಆತ ಕಾರನ್ನು ಹತ್ತಿ ಸ್ಥಳದಿಂದ ಪರಾರಿಯಾಗುತ್ತಾನೆ. ಈವೇಳೆ ಸ್ಥಳದಲ್ಲಿ ಮೂರು ಜನ ಇದ್ದರೂ, ಸಂತ್ರಸ್ತೆಗೆ ಯಾರೊಬ್ಬರೂ ಸಹಾಯ ಮಾಡಿಲ್ಲ.
ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ಎಫ್‌ಐಆರ್ ಪ್ರಕಾರ, ನವೀನ್ ಮತ್ತು ಸಂತ್ರಸ್ತೆ 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾರೆ. ಫೋನ್ ಕರೆಗಳು ಮತ್ತು ಸಂದೇಶಗಳ ಮೂಲಕ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ. ಕಾಲಾನಂತರದಲ್ಲಿ, ನವೀನ್ ತನ್ನೊಂದಿಗೆ ಸಂಬಂಧದಲ್ಲಿರಲು ಯುವತಿ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದಾನೆ. ಆದರೆ, ಆಕೆ ಅದನ್ನು ವಿರೋಧಿಸಿದ್ದಾಳೆ.
ಡಿಸೆಂಬರ್ 22 ರಂದು, ನವೀನ್ ತನ್ನ ಕಾರಿನಲ್ಲಿ ಮಹಿಳೆಯ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಕ್ಕೆ ಹೋಗಿದ್ದನೆಂದು ವರದಿಯಾಗಿದೆ. ಪಿಜಿಯ ಹೊರಗೆ ಆಕೆ ನಿಂತಿರುವುದನ್ನು ಕಂಡ ನವೀನ್, ಆಕೆಯನ್ನು ಎಳೆದಾಡಿ, ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾನೆ.
ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement