

ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದ 208 ಎಕರೆ ವಿಸ್ತೀರ್ಣ ಹೊಂದಿರುವ ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ಆಧುನಿಕ ತಂತ್ರಜ್ಞಾನದ ಯಂತ್ರವನ್ನು ಬಳಸುವ ಕಾರ್ಯಕ್ಕೆ ಬುಧವಾರ ಚಾಲನೆ ದೊರೆತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಅನುಮೋದನೆಯಾಗಿದ್ದ ಯೋಜನೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮಹೇಶ್ವರ್ ರಾವ್ ಅವರು, ಅಗತ್ಯವಿರುವ ಇತರೆ ಕೆರೆಗಳಲ್ಲಿಯೂ ಈ ಯಂತ್ರವನ್ನು ಬಳಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಪಾಲಿಕೆ ರೂ. 1.28 ಕೋಟಿ ವೆಚ್ಚದಲ್ಲಿ ‘ರುದ್ರಾ ಆಕ್ವಾ ಮ್ಯಾಕ್ಸ್’ ಎಂಬ ಕಳೆ ತೆಗೆಯುವ ಯಂತ್ರವನ್ನು ಖರೀದಿಸಿದೆ. ಈ ಯಂತ್ರವು ಒಂದೇ ಬಾರಿ ಗರಿಷ್ಠ 5 ಟನ್‌ಗಳಷ್ಟು ಕಳೆ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಲೈವ್ GPS ಟ್ರ್ಯಾಕಿಂಗ್ ವ್ಯವಸ್ಥೆ, ಸುರಕ್ಷತಾ ಸಂವೇದಕಗಳು ಮತ್ತು ಕ್ಯಾಮೆರಾಗಳನ್ನು ಹೊಂದಿರುವ ಈ ಯಂತ್ರದ ಕಾರ್ಯಾಚರಣೆಯನ್ನು ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ಮಾಡಬಹುದಾಗಿದೆ ಎಂದು ಆಯುಕ್ತರು ಇದೇ ವೇಳೆ ಮಾಹಿತಿ ನೀಡಿದರು.
ಮಡಿವಾಳ ಕೆರೆಯನ್ನು ರೂ. 15 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮಕ್ಕಳ ಆಟದ ಮೈದಾನ, ರಸ್ತೆ ದೀಪಗಳ ಅಳವಡಿಕೆ, ಶೌಚಾಲಯಗಳು, ಸೇತುವೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಹಿಂದೆ ಕೆರೆಯಲ್ಲಿ ದೋಣಿ ವಿಹಾರ ವ್ಯವಸ್ಥೆ ಇತ್ತು. ಆದರೀಗ ಅದು ಸ್ಥಗಿತಗೊಂಡಿದೆ.
Advertisement