

ಬೆಂಗಳೂರು: ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಪ್ರಕರಣ ಇದೀಗ ರಾಜಕೀಯ ಕೆಸರೆರೆಚಾಟಕ್ಕೆ ಗುರಿಯಾಗಿದೆ. ತೆರವು ಕಾರ್ಯಾಚರಣೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಬುಲ್ಡೋಜರ್ ದಾಳಿಗೆ ಹೋಲಿಸಿದ್ದಾರೆ. ಕರ್ನಾಟಕ ಸರ್ಕಾರಕ್ಕೂ ಉತ್ತರ ಪ್ರದೇಶ ಸರ್ಕಾರದ ಗಾಳಿ ಬೀಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಹೇಳುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಬೆಂಗಳೂರಿನ ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಅಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಈ ಚಳಿಗಾಲದಲ್ಲಿ ಮನೆಗಳನ್ನು ನೆಲಸಮ ಮಾಡಿದರೆ ಅವರು ಎಲ್ಲಿಗೆ ಹೋಗಬೇಕು. ಈ ಚಳಿಯಲ್ಲಿ ಮಕ್ಕಳ, ಮಹಿಳೆಯರನ್ನು ಬೀದಿಗೆ ಹಾಕಿದ್ದಾರೆ ಎಂದು ಕೇರಳ ಮುಖ್ಯಮಂತ್ರಿಗಳು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದರು.
ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕದಲ್ಲಿ ಬುಲ್ಡೋಜರ್ ರಾಜ್ ನಡೆಯುತ್ತಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಪಿಣರಾಯಿ ವಿಜಯನ್ ರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಬೆಂಗಳೂರಿನ ವಿಚಾರ ಏನು ಎಂದು ಅವರು ತಿಳಿಯಬೇಕು. ಈ ಜಾಗ ಘನತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿ ಪಿಟ್ ಆಗಿದೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ 9 ವರ್ಷಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಲ್ಯಾಂಡ್ ಮಾಫಿಯಾದವರು ಸ್ಲಂಗಳನ್ನು ನಿರ್ಮಿಸಲು ನಾವು ಬಿಡುವುದಿಲ್ಲ. ನಾವು ನಮ್ಮ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಈ ಮಧ್ಯೆ ಕೇರಳ ರಾಜ್ಯಸಭಾ ಸದಸ್ಯ ಎ ಎ ರಹೀಮ್ ನೇತೃತ್ವದ ನಿಯೋಗವು ಕೋಗಿಲು ಬಡಾವಣೆಗೆ ಭೇಟಿ ನೀಡಿ ಕರ್ನಾಟಕ ಸರ್ಕಾರದ 'ಅಲ್ಪಸಂಖ್ಯಾತ ವಿರೋಧಿ' ನಿಲುವನ್ನು ಟೀಕಿಸಿದೆ.
Advertisement