

ಬೆಂಗಳೂರು: ಮಹಾರಾಷ್ಟ್ರ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಪತ್ತೆ ಹೆಚ್ಚಿದ್ದು ನೋಡಿದರೆ ಡ್ರಗ್ ಮಾಫಿಯಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ, ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಡ್ತಾ ಪಂಜಾಬ್ ರೀತಿ ಉಡ್ತಾ ಕರ್ನಾಟಕ ಆಗಲಿದೆ ಎಂದು ಬಿಜೆಪಿ ಎಚ್ಚರಿಸಿದೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು, ರೈತರ ಗೊಬ್ಬರ ಕಳ್ಳತನ ಮಡುವವರಿಗೆ ಕಠಿಣ ಕಾನೂನಿನಲ್ಲ, ಡ್ರಗ್ ಮಾರುವವರಿಗೂ ಬಿಗಿ ಕಾನೂನಿಲ್ಲ. ಕಳ್ಳಭಟ್ಟಿ ಮಾಡುವವರಿಗೂ ಬಿಗಿ ಕಾನೂನಿಲ್ಲ ಈ ರಾಜ್ಯ ಸಂಪೂರ್ಣ ಕಾನೂನು ಸುವ್ಯವಸ್ಥೆ ಅಲ್ಲದೇ ಅನೈತಿಕ ಚಟುವಟಿಯಿಕೆಯಿಂದ ಕೂಡಿದ ರಾಜ್ಯವಾಗಿದೆ ಎಂದು ಕಿಡಿಕಾರಿದರು.
ಈ ಸರ್ಕಾರ ಸಂಪೂರ್ಣ ಕಚ್ಚಾಟದಲ್ಲಿ ಮುಳುಗಿದೆ. ಹೀಗಾಗಿ ಡ್ರಗ್ ಮಾಫಿಯಾ ಮುಕ್ತವಾಗಿ ಕೆಲಸ ಮಾಡುತ್ತಿದೆ. ಇದು ಡ್ರಗ್ ಮಾಫಿಯಾ ನಿಯಂತ್ರಣದಲ್ಲಿರುವ ಸರ್ಕಾರವಾಗಿದೆ. ರಾಜ್ಯ ಸರ್ಕಾರ ದ್ವೇಷ ಭಾಷಣ ಮಾಡುವುದರ ವಿರುದ್ಧ ಕಾನೂನು ತರುವ ಬದಲು ಇಂತಹದ್ದಕ್ಕೆ ಕಡಿವಾಣ ಹಾಕುವ ಕಾನೂನು ತರಬೇಕಿತ್ತು ಎಂದು ಹೇಳಿದರು.
ಡಗ್ಸ್ ಬಳಕೆ ಕರ್ನಾಟಕದಲ್ಲಿ ಅತಿ ಹೆಚ್ಚಿದೆ. ಅದನ್ನು ನಿಯಂತ್ರಿಸಲು ಸರ್ಕಾರ ಸ್ಪೆಷಲ್ ಸ್ಕ್ವಾಡ್ ಮಾಡಿದ್ದಾರೆ. ಆದರೆ, ಭಯ ಇಲ್ಲ. ಹಲವಾರು ಪ್ರಸಂಗಗಳಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಇದಕ್ಕಾಗಿ ವಿಶೇಷ ಕಾನೂನಿದೆ. ಅದನ್ನು ಬಳಕೆ ಮಾಡುತ್ತಿಲ್ಲ. ಮಹಾರಾಷ್ಟ್ರದವರು ಬಂದು ಇಲ್ಲಿ ಡಗ್ಸ್ ಪತ್ತೆ ಹೆಚ್ಚುತ್ತಾರೆ ಎಂದರೆ ಇಲ್ಲಿನ ಪೊಲೀಸರು ಡ್ರಗ್ ಟ್ರಾಫಿಕಿಂಗ್‌ನಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಹಾವೇರಿ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲೂ ಡ್ರಗ್ಸ್ ಮುಕ್ತವಾಗಿ ಮಾರಾಟವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಪಂಜಾಬ್ ಆದ ಹಾಗೆ ಆಗುತ್ತದೆ. ಉಡ್ತಾ ಪಂಜಾಬ್ ಥರಾ ಉಡ್ತಾ ಕರ್ನಾಟಕ ಆಗುತ್ತದೆ ಎಂದು ತಿಳಿಸಿದರು.
ಯಾವ ಅಧಿಕಾರಿಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಆ ಎಲ್ಲ ಅಧಿಕಾರಿಗಳನ್ನು ಬದಲಾಯಿಸಬೇಕು. ಮುಖ್ಯವಂತಿಗಳು ಎಚ್ಚೆತ್ತುಕೊಳ್ಳಬೇಕು. ಸ್ಟ್ಯಾಡ್ ಗಳನ್ನು ಮಾಡಿ ಡ್ರಗ್ ಟ್ರಾಫಿಕಿಂಗ್ ಮಾಡುವವರನ್ನು ಒದ್ದು ಒಳಗೆ ಹಾಕಬೇಕು. ಡ್ರಗ್ ಟ್ರಾಫಿಕಿಂಗ್ ಮಾಡುವರಿಗೆ ಕಠಿಣ ಕಾನೂನು ತರಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಂಗ್ಲಾ ಸರ್ಕಾರ ಜನರ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಅಲ್ಪ ಸಂಖ್ಯಾತರು ಅಸುರಕ್ಷಿತವಾಗಿದ್ದಾರೆ. ಯೂನಸ್ ಸರ್ಕಾರ ಹಿಂದೂ ಜನರು, ಸಂಸ್ಥೆಗಳು ಮತ್ತು ಮನೆಗಳಿಗೆ ರಕ್ಷಣೆ ಕೊಡಬೇಕು. ಇಲ್ಲದಿದ್ದರೆ ದಕ್ಷಿಣ ಏಷಿಯಾ ಪ್ರದೇಶ ಸಮಸ್ಯೆಗೆ ಸಿಲುಕಲಿದೆ. ಅದಕ್ಕಾಗಿ ಅವರು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಕರ್ನಾಟಕದ ರಾಜಧಾನಿ ಬೆಂಗಳೂರು ಈಗ 'ಡ್ರಗ್ಸ್ ಹಬ್', 'ಉಡ್ತಾ ಬೆಂಗಳೂರು' ಆಗಿ ಮಾರ್ಪಡುತ್ತಿರುವುದು ಆತಂಕಕಾರಿ ಮಾತ್ರವಲ್ಲ, ಕಾನೂನು ಸುವ್ಯವಸ್ಥೆಯ ಕುಸಿತದ ದುರಂತ ಸಾಕ್ಷ್ಯ ಎಂದು ಕಿಡಿಕಾರಿದ್ದಾರೆ.
ಮೈಸೂರಿನ ಬೆನ್ನಲ್ಲೇ ಈಗ ಬೆಂಗಳೂರಿನಲ್ಲೂ ಮೂರು ಡ್ರಗ್ ಫ್ಯಾಕ್ಟರಿಗಳನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದರೆ ನಮ್ಮ ರಾಜ್ಯದ ಗುಪ್ತಚರ ಇಲಾಖೆ ಮತ್ತು ಪೊಲೀಸ್ ವ್ಯವಸ್ಥೆ ನಿದ್ರಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರೇ, ಪೊಲೀಸರನ್ನು ಕೇವಲ ವಿರೋಧ ಪಕ್ಷದವರ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆಯೇ? ನಮ್ಮ ಮಕ್ಕಳ, ಯುವಜನತೆಯ ಬಗ್ಗೆ ನಿಮಗೆ ಕಿಂಚಿತ್ತೂ ಕಾಳಜಿ ಇಲ್ಲವೆ? ಹೊರರಾಜ್ಯದ ಪೊಲೀಸರು ಬಂದು ನಮ್ಮ ರಾಜ್ಯದ ಡ್ರಗ್ ಮಾಫಿಯಾ ಬಯಲಿಗೆಳೆಯಬೇಕಾದ ಅನಿವಾರ್ಯತೆ ಬಂದಿರುವುದು ಈ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮಾತ್ರವಲ್ಲ, ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನೆರೆರಾಜ್ಯದ ಪೊಲೀಸರ ಕಾರ್ಯಾಚರಣೆಯಿಂದಾಗಿ ಇಷ್ಟು ಬಯಲಿಗೆ ಬಂದಿದೆ. ಇನ್ನೂ ತೆರೆಮರೆಯಲ್ಲಿ, ಕಾನೂನಿನ ಕಣ್ಣು ತಪ್ಪಿಸಿ ಯಾವ ಪ್ರಮಾಣದಲ್ಲಿ ಈ ಡ್ರಗ್ಸ್ ಮಾಫಿಯಾ ಕೆಲಸಮಾಡುತ್ತಿರಬಹುದು ಎನ್ನುವುದು ನಿಜಕ್ಕೂ ಗಂಭೀರವಾದ ಹಾಗೂ ಕಳವಳಕಾರಿ ಸಂಗತಿ. ಈ ಕೂಡಲೇ ನಮ್ಮ ಪೊಲೀಸ್ ವ್ಯವಸ್ಥೆ ಸಕ್ಷಮವಾಗಿ ಕಾರ್ಯನಿರ್ವಹಿಸಿ, ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೂ ಆಸ್ಪದ ಕೊಡದೆ, ಈ ಡ್ರಗ್ ಮಾಫಿಯಾವನ್ನು ಬೇರುಸಹಿತ ಕಿತ್ತೆಸೆಯಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಬೇಕಾಗಿದೆ. ಮೊದಲು ನಮ್ಮ ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡಿ, ಡ್ರಗ್ಸ್ ಪಿಡುಗಿಗೆ ಸಂಪೂರ್ಣ ಕಡಿವಾಣ ಹಾಕಿ ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ "ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ" ಎಂದು ಇದರ ಗಂಭೀರತೆ ಅರಿಯದೆ ಗೃಹ ಸಚಿವ ಪರಮೇಶ್ವರ್ ಅವರು ಉಡಾಫೆ ಉತ್ತರ ಕೊಟ್ಟಿದ್ದರು. ಕಳೆದ ಜುಲೈನಲ್ಲಿ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಚ್ಚಿ, ಸುಮಾರು 390 ಕೋಟಿ ರು. ಮೌಲ್ಯದ 192 ಕೆ.ಜಿ. ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಂಡಿದ್ದ ಮಹಾರಾಷ್ಟ್ರ ಪೊಲೀಸರು ಇದೀಗ ಬೆಂಗಳೂರಿನ 3 ಡ್ರಗ್ಸ್ ಫ್ಯಾಕ್ಟರಿ ಮೇಲೆ ನಡೆಸಿ 56 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಶೌರ್ಯ, ಸಾಹಸ, ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೆ ಹಚ್ಚಲು, ಡ್ರಗ್ಸ್ ದಂಧೆಕೋರರನ್ನು ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಯುವ ಜನಾಂಗದ ಭವಿಷ್ಯಕ್ಕೆ ಮಾರವಾಗಿರುವ ಈ ಡ್ರಗ್ಸ್ ದಂಧೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Advertisement