

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ನಗರದ ಪ್ರಮುಖ ಸ್ಥಳಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ನಗರದಾದ್ಯಂತ ಕುಡಿದು ವಾಹನ ಚಾಲನೆ ತಡೆಗೆ ತಪಾಸಣೆ (Drunk and Drive special drives) ನಡೆಸಲು ನಗರ ಸಂಚಾರ ಪೊಲೀಸರು ಒಟ್ಟು 166 ಪಾಯಿಂಟ್ ಗಳನ್ನು ಗುರುತಿಸಿದ್ದಾರೆ.
ವ್ಹೀಲಿಂಗ್, ಸ್ಟಂಟ್ ರೈಡಿಂಗ್ ಮತ್ತು ಅಡ್ಡಾದಿಡಿ ಡ್ರೈವಿಂಗ್ ತಡೆಯಲು ಮತ್ತು ಮೇಲ್ವಿಚಾರಣೆ ಮಾಡಲು ಒಟ್ಟಾರೇ 92 ಸ್ಥಳಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ನಿಯಂತ್ರಿಸಲು ಮತ್ತು ಅತಿ ವೇಗದ ಚಾಲನೆ ತಡೆಯಲು ಬುಧವಾರ ರಾತ್ರಿ 11 ರಿಂದ ಗುರುವಾರ ಬೆಳಿಗ್ಗೆ 6 ರವರೆಗೆ ರಾತ್ರಿ ಸಮಯದಲ್ಲಿ 50 ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಮೇಲ್ಸೇತುವೆಯಲ್ಲಿ ಕೇವಲ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಅನುಮತಿ ಒದಗಿಸಲಾಗಿದೆ.
ಸುರಕ್ಷಿತ ಮತ್ತು ಕ್ರಮಬದ್ಧವಾಗಿ ಹೊಸ ವರ್ಷದ ಆಚರಣೆ ನಡೆಯುವಂತೆ ಒಟ್ಟು 10 ಡ್ರೋನ್‌ಗಳು, 249 ಕೋಬ್ರಾ ವಾಹನಗಳು ಮತ್ತು 400 ಟ್ರಾಫಿಕ್ ವಾರ್ಡನ್‌ಗಳನ್ನು ಬಳಸಲಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ. ಚರ್ಚ್ ಸ್ಟ್ರೀಟ್, ಸೆಂಟ್ ಮಾರ್ಕ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಅಂದು ಬುಧವಾರ ರಾತ್ರಿ 8 ಗಂಟೆಯಿಂದ ಗುರುವಾರ ಬೆಳಗ್ಗೆ 2 ಗಂಟೆಯವರೆಗೂ ವಾಹನಗಳ ಪಾರ್ಕಿಂಗ್ ನ್ನು ನಿಷೇಧಿಸಲಾಗಿದೆ.
ಈ ರಸ್ತೆಗಳಲ್ಲಿ ಪೊಲೀಸರು ಮತ್ತು ತುರ್ತು ಅಗತ್ಯವಿರುವ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಈ ರಸ್ತೆಗಳಿಗೆ ಬರುವವರಿಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ: MG ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ, ಬ್ರಿಗೇಡ್ ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಓಪೇರಾ ಜಂಕ್ಷನ್ ವರೆಗೆ,
ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ, ರೆಸಿಡೆನ್ಸಿ ರಸ್ತೆ, ಆಶೀರ್ವಾದಮ್ ಜಂಕ್ಷನ್ ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ.
ಮ್ಯೂಸಿಯಂ ರಸ್ತೆ, ಎಂಜಿ ರಸ್ತೆ ಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆವರೆಗೆ ರೆಸ್ಟ್ ಹೌಸ್ ರಸ್ತೆ, ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ, ರೆಸಿಡೆನ್ಸಿ ಕ್ರಾಸ್ ರಸ್ತೆ, ರೆಸಿಡೆನ್ಸಿ ರಸ್ತೆ ಜಂಕ್ಷನ್ ನಿಂದ ಎಂಜಿ ರಸ್ತೆ ಜಂಕ್ಷನ್ ವರೆಗೆ (ಶಂಕರ್ ನಾಗ್ ಚಿತ್ರಮಂದಿರದವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ವ್ಯವಸ್ಥೆ: ಕ್ವೀನ್ಸ್ ವೃತ್ತದಿಂದ ಹಲಸೂರು ಕಡೆಗೆ ಹೋಗುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದಿಂದ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್- ಬಿ.ಆರ್. ವಿ.ಜಂಕ್ಷನ್- ಕಬ್ಬನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂಜಿ ರಸ್ತೆ ಸೇರಬಹುದು. ಹಲಸೂರಿನಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ- ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆ ಸೇರಬೇಕು. ಕಾಮರಾಜ್ ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲ ತಿರುವು ಪಡೆದು ಎ.ಎಸ್. ಸಿ. ಸೆಂಟ್ರಲ್ ನಲ್ಲಿ ಎಡ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು. ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ ಓಪೇರಾ ಜಂಕ್ಷನ್ ಕಡೆಗೆ ಮಾತ್ರ ಕಾಲ್ನಡಿಯಲ್ಲಿ ಸಾಗಬೇಕು. ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಅವಕಾಶವಿಲ್ಲ.
ಎಲ್ಲೆಲ್ಲಿ ಪಾರ್ಕಿಂಗ್ ನಿರ್ಬಂಧ:
ಡಿಸೆಂಬರ್ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 3 ಗಂಟೆಯವರೆಗೂ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಓಲ್ಡ್ ಪಿಎಸ್ ಜಂಕ್ಷನ್ ವರೆಗೆ, ಚರ್ಚ್ ಸ್ಟ್ರೀಟ್ ನಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ ರಸ್ತೆ ಜಂಕ್ಷನ್ ವರೆಗೆ, ರೆಸ್ಟ್ ಹೌಸ್ ರಸ್ತೆಯಲ್ಲಿ ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ ಮ್ಯೂಸಿಯಂ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ ಎಸ್ ಬಿಐ ವೃತ್ತದವರಗೆ, ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್ ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಹಾಗೂ ಸೆಂಟ್ ಮಾರ್ಕ್ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಡಿಸೆಂಬರ್ 31ರ ಸಂಜೆ 4 ಗಂಟೆಯೊಳಗೆ ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಪಾರ್ಕಿಂಗ್ ವ್ಯವಸ್ಥೆ: ಸಾರ್ವಜನಿಕರ ಅನುಕೂಲಕ್ಕಾಗಿ ಶಿವಾಜಿನಗರ ಬಿಎಂಟಿಸಿ ಶಾಪಿಂಗ್ ಕಾಂಪ್ಲೆಕ್ಸ್ -1ನೇ ಮಹಡಿ, ಯುಬಿಸಿಟಿ, ಗರುಡಾ ಮಾಲ್, ಕಾಮರಾಜ್ ರಸ್ತೆ (ಕಬ್ಬನ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ) ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Advertisement