

ಬೆಂಗಳೂರು: ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ನಗರದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರ ಸಾಗರ ಹರಿದು ಬರುತ್ತಿದೆ.
ಅರಸೀಕೆರೆ ಮಲೇಕಲ್ಲು ಅಮರಗಿರಿ ತಿರುಪತಿ ದೇವಾಲಯ, ಮಾಲೂರಿನ ಚಿಕ್ಕತಿರುಪತಿ, ಮೈಸೂರು, ಬೆಳಗಾವಿ ಹುಬ್ಬಳ್ಳಿ ಚಿಕ್ಕಮಗಳೂರು, ಹಾಸನ, ಶೀರಂಗಪಟ್ಟಣದ ರಂಗನಾಥ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ದೇಗುಲದಲ್ಲಿ ಪಂಚಾಭಿಷೇಕ, ಪುಷ್ಪಭಿಷೇಕ ಸೇರಿದಂತೆ ವಿವಿಧ ಪೋಜೆ ನಡೆಯುತ್ತಿದ್ದು, ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ಬೆಂಗಳೂರಿನ ಮಲ್ಲೇಶ್ವರಂ ಹಾಗು ಜೆಪಿ ನಗರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. ವೈಕುಂಠ ಏಕಾದಶಿ ಪ್ರಯುಕ್ತವಾಗಿಯೇ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ಆಗಮಿಸಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯುತ್ತಿದ್ದು, ಇಂದು ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ.
ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಹೀಗಾಗಿಯೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ ಇದೆ.
ವಾಹನ ಸಂಚಾರ ನಿರ್ಬಂಧ
ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪೂಜಾ ಮತ್ತು ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ದಿನಾಂಕ:30.12.2025ರಂದು ಕೋಟೆ ವೆಂಕಟರಮಣ ಸ್ವಾಮಿಯ ವೈಕುಂಠ ಏಕಾದಶಿಯ ಪ್ರಯುಕ್ತ ವಿ ವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಆರ್ ರಸ್ತೆ(ಶಿವಶಂಕರ್ ಸರ್ಕಲ್ ನಿಂದ ಮೆಡಿಕಲ್ ಕಾಲೇಜು ಜಂಕ್ಷನ್ ವರೆಗೆ) ಯನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ ಆರ್ ರಸ್ತೆ (ಶಿವಶಂಕರ್ ಸರ್ಕಲ್ ನಿಂದ ಮೆಡಿಕಲ್ ಕಾಲೇಜು ಜಂಕ್ಷನ್ ವರೆಗೆ) ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:
ಕೆ ಆರ್ ರಸ್ತೆಯಿಂದ ಮೆಡಿಕಲ್ ಕಾಲೇಜು ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು, ಶಿವಶಂಕರ್ ಸರ್ಕಲ್ ಬಳಿ ಎಡ ತಿರುವನ್ನು ಪಡೆದು ಮಕ್ಕಳ ಕೂಟ ಜಂಕ್ಷನ್ ಬಳಿ ಬಲ ತಿರುವನ್ನು ಪಡೆದು ಪಿ.ಎಂ.ಕೆ ರಸ್ತೆಯಲ್ಲಿ ಚಲಿಸಿ ಮಿಂಟೋ ಜಂಕ್ಷನ್ ಬಳಿ ಬಲತಿರುವನ್ನು ಪಡೆದು ಮೆಡಿಕಲ್ ಕಾಲೇಜು ಜಂಕ್ಷನ್‌ಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿರುತ್ತದೆ.
ಲಾಲ್‌ಬಾಗ್ ಪೋರ್ಟ್ ರಸ್ತೆಯಿಂದ ಮೆಡಿಕಲ್ ಕಾಲೇಜು ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು, ಶಿವಶಂಕರ್ ಸರ್ಕಲ್ ಬಳಿ ನೇರವಾಗಿ ಮುಂದೆ ಸಾಗಿ ಬಸಪ್ಪ ರಸ್ತೆ ಮಕ್ಕಳ ಕೂಟ ಜಂಕ್ಷನ್ ಬಳಿ ಬಲ ತಿರುವನ್ನು ಪಡೆದು ಪಿ.ಎಂ.ಕೆ ರಸ್ತೆಯಲ್ಲಿ ಚಲಿಸಿ ಮಿಂಟೋ ಜಂಕ್ಷನ್ ಬಳಿ ಬಲತಿರುವನ್ನು ಪಡೆದು ಮೆಡಿಕಲ್ ಕಾಲೇಜು ಜಂಕ್ಷನ್‌ಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿದೆ.
Advertisement