
ಮೈಸೂರು: ಕೇಂದ್ರ ಸರ್ಕಾರ ಕನ್ನಡಿಗರ ಪಾಲಿಗೆ ಕಿವುಡಾಗಿದೆ. ಅವರಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗುತ್ತಿದೆ. ಕೇಂದ್ರ ಸರ್ಕಾರ ಕನ್ನಡಿಗರ ಪಾಲಿಗೆ ಕಿವುಡಾಗಿದೆ. ಅವರಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಡುತ್ತೇವೆ. ತೆರಿಗೆ ಹಂಚಿಕೆಯಲ್ಲಿ ಕಡಿಮೆ ಅನುದಾನ ಬರುತ್ತಿದೆ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ, ಕೇಂದ್ರದಿಂದ ಅನುದಾನ ಬರುತ್ತಿಲ್ಲ ಎಂದು ಶಾಸಕರು, ಸಂಸದರು, ಸಚಿವರು ದೆಹಲಿಯಲ್ಲಿಯೇ ಪ್ರತಿಭಟನೆ ಮಾಡಿದೆವು. ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಂದಿನವರೆಗೂ ಒಂದು ರೂಪಾಯಿ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2016 ರಲ್ಲಿ ನಮ್ಮ ಸರ್ಕಾರ ಸೇತುವೆ ಕಾಮಗಾರಿಗೆ ಮಂಜೂರಾತಿ ಕೊಟ್ಟು, 2017 ರಲ್ಲಿ ಕೆಲಸ ಪ್ರಾರಂಭವಾಗಿತ್ತು. ಹಿಂದಿನ ಸರ್ಕಾರ ಅದನ್ನು ಪೂರ್ಣಮಾಡದೇ ವಿಳಂಬವಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನವನ್ನು ನೀಡಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಮೇಲ್ಸೇತುವೆ ಉದ್ಘಾಟನೆಯಾಗುತ್ತಿದೆ. ಕೊಡಗಿನಲ್ಲಿ ಸಿ ಅಂಡ್ ಡಿ ಭೂಮಿ ಮತ್ತು ಸೆಕ್ಷನ್ 4 ಅಧಿಸೂಚಿತ ಜಾಗವನ್ನು ಮೀಸಲು ಅರಣ್ಯ ಮಾಡುವ ಪ್ರಸ್ತಾವಕ್ಕೆ ರೈತರು ವಿರೋಧ ಮಾಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಮಿತಿ ರಚಿಸಬೇಕಾಗುತ್ತದೆ. ಸಮಿತಿ ವರದಿ ಕೊಟ್ಟ ನಂತರ ಸರ್ಕಾರ ಕ್ರಮ ವಹಿಸಲಿದೆ.
ವನ್ಯಜೀವಿ ಮಾನವ ಸಂಘರ್ಷವು ಕಾಡಿಂಚಿನ ಊರುಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಆನೆಗಳು, ಚಿರತೆಗಳ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ. ಹಾಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ ಕೈಕೊಳ್ಳಲಾಗುವುದು. ಕಾವೇರಿ ನದಿ ಸ್ವಚ್ಛತೆಯ ಬಗ್ಗೆ ರಚಿಸಲಾಗಿದ್ದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ನೀಡಿದ ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ ಅವರು, ಹಲವು ಬೇಡಿಕೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಜಗಜ್ಜಾಹೀರಾಗಿದೆ. ನಮ್ಮಒಕ್ಕೂಟ ವ್ಯವಸ್ಥೆಯು ಬಲಿಷ್ಠವಾಗಿರಬೇಕೆಂದರೆ ಕೇಂದ್ರ ಸರ್ಕಾರವು ತಾರತಮ್ಯರಹಿತ, ನ್ಯಾಯಸಮ್ಮತ, ಪಾರದರ್ಶಕ ನೀತಿಯನ್ನು ತನ್ನದಾಗಿಸಿಕೊಳ್ಳಬೇಕು. ರಾಜ್ಯಗಳನ್ನು ಸಂಪನ್ಮೂಲ ಸ೦ಗ್ರಹಣೆ ಮಾಡುವ ಘಟಕಗಳೆಂದು ನೋಡದೆ, ಅವುಗಳ ಕಷ್ಟನಷ್ಟಗಳಿಗೆ ಮಾನವೀಯವಾಗಿ ಸ್ಪಂದಿಸಬೇಕು. ತೆರಿಗೆ ಪಾಲಿನ ಹಂಚಿಕೆಯೂ ಸೇರಿದಂತೆ ರಾಜ್ಯಗಳಿಗೆ ಸ೦ಪನ್ಮೂಲ ಹಂಚಿಕೆ ಮಾಡುವ ವಿಷಯದಲ್ಲಿ ವೈಜ್ಞಾನಿಕವಾದ ಮಾನದಂಡಗಳನ್ನು ಅನುಸರಿಸಬೇಕು.
ವಿಶೇಷವಾಗಿ, ಕರ್ನಾಟಕವೂ ಸೇರಿದಂತೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳ ಆದ್ಯತೆಗಳನ್ನು ಗುರುತಿಸಿ ಸ೦ಪನ್ಮೂಲ ಹಂಚಿಕೆಯ ವಿಚಾರದಲ್ಲಿ ಅವುಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕು, ಅವುಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇದರಿಂದ ದೇಶಕ್ಕೆ ಹೆಚ್ಚು ಲಾಭವಿದ್ದು, ಈ ರಾಜ್ಯಗಳ ಸಾಧನೆಯ ಪಾಲು ಇತರೆ ರಾಜ್ಯಗಳಿಗೂ ಸಹಜವಾಗಿಯೇ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನಿರಂತರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತ೦ದು ಅವುಗಳನ್ನು ಪರಿಹರಿಸಲು ಮುಂದಾಗಬೇಕೆಂದು ನಮ್ಮ ಸರ್ಕಾರ ಒತ್ತಾಯಿಸುತ್ತಲೇ ಬ೦ದಿದೆ. ಇದೇ ಫೆಬ್ರವರಿಯ ಎರಡರಂದು ಕೇಂದ್ರ ಹಣಕಾಸು ಸಚಿವರು 2025-26ನೇ ಸಾಲಿನ ಬಜೆಟ್ ಮಂಡಿಸಲಿರುವ ಹಿನ್ನೆಲೆಯಲ್ಲಿ ಅದರಲ್ಲಿ ಸೇರಿಸಬೇಕಾಗಿರುವ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಹಿ೦ದೆಯೇ ಕೇ೦ದ್ರ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಇವುಗಳಲ್ಲಿ ಮುಖ್ಯವಾದವುಗಳನ್ನು ರಾಜ್ಯದ ಜನತೆಯೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯ ವರೆಗೆ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ ರೂ.5495 ಕೋಟಿ ಮತ್ತು ರಾಜ್ಯ ಕೇಂದ್ರಿತ ರೂ.6000 ಕೋಟಿ ಮೊತ್ತದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ.
ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ. 2021-22, 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ 1311 ಕೋಟಿ, ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ರೂ.775 ಕೋಟಿ ಕಡಿಮೆ ಅನುದಾನ ನೀಡಲಾಗಿದೆ. 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ, ಆರೋಗ್ಯ ಅನುದಾನದಲ್ಲಿ ರೂ.826 ಕೋಟಿ, ಎಸ್ ಡಿ ಆರ್ ಎಫ್ ಅಡಿಯಲ್ಲಿ ರೂ.340 ಕೋಟಿ ಹಣವನ್ನು ಕಡಿತ ಮಾಡಲಾಗಿದೆ. ಈ ಒಟ್ಟು ಬಾಕಿ ರೂ.3,300 ಕೋಟಿ ರೂಪಾಯಿ ಮತ್ತು 2024-25 ಮತ್ತು 2025-26ರ ಅವಧಿಯಲ್ಲಿ ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು.
ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. 2010-11ರಲ್ಲಿ ಒಟ್ಟು ತೆರಿಗೆಯ ಶೇಕಡಾ 8.1ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್ ನ ಪ್ರಮಾಣ 2024-25ರಲ್ಲಿ ಶೇಕಡಾ 14ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಪಾಲಿನಲ್ಲಿ ಕಡಿತ ಉಂಟಾಗಿದೆ. ಇದರ ಜೊತೆಯಲ್ಲಿ ಕೇಂದ್ರದ ಸಹಾಯ ಧನ ಕೂಡಾ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಸೆಸ್ ಮತ್ತು ಸರ್ಚಾರ್ಜ್ ಅನ್ನು ರದ್ದುಗೊಳಿಸಬೇಕು ಇಲ್ಲವೆ ಅದನ್ನು ಒಟ್ಟು ತೆರಿಗೆಯ ನಿಧಿಗೆ ಸೇರಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು.
ಜಿಎಸ್ ಟಿ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಜಿಎಸ್ ಟಿ ಪರಿಹಾರ ಸೆಸ್ ಜಾರಿಗೊಳಿಸಲಾಗಿತ್ತು. 2022ರ ಜುಲೈ ತಿಂಗಳಲ್ಲಿಯೇ ಪರಿಹಾರ ನೀಡುವುದನ್ನು ನಿಲ್ಲಿಸಿದರೂ 2026ರ ವರೆಗೆ ಸೆಸ್ ಸಂಗ್ರಹವನ್ನು ಮುಂದುವರಿಸಲಾಗಿದೆ.. ಈ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್ ಜಿಎಸ್ ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು.
1985ರಿಂದ ಸೇವಾ ತೆರಿಗೆಯನ್ನು ಪರಿಷ್ಕರಿಸಿಲ್ಲ, ಈ ದೀರ್ಘಾವಧಿಯಲ್ಲಿ ನಡೆದಿರುವ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸೇವಾ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿಮಾಡಬೇಕು.
ಬಂಡವಾಳ ವೆಚ್ಚಕ್ಕೆ ವಿಶೇಷ ನೆರವು ನೀಡುವ ಯೋಜನೆ ಸ್ವಾಗತಾರ್ಹವಾದುದು. ಆದರೆ ತೆರಿಗೆ ಹಂಚಿಕೆಯಲ್ಲಿ ಸಿಗುವ ಪಾಲಿನ ಆಧಾರದಲ್ಲಿಯೇ ಈ ವಿಶೇಷ ನೆರವು ನೀಡುತ್ತಿರುವ ಕಾರಣದಿಂದಾಗಿ ಈಗಾಗಲೇ ತೆರಿಗೆ ಹಂಚಿಕೆಯಲ್ಲಿ ಅನ್ಯಾಯಕ್ಕೀಡಾಗಿರುವ ಕರ್ನಾಟಕಕ್ಕೆ ಅತಿ ಕಡಿಮೆ ನೆರವು ಸಿಗುತ್ತಿದೆ. ಈ ಕಾರಣಕ್ಕಾಗಿ ವಿಶೇಷ ನೆರವು ಯೋಜನೆಯ ಮಾನದಂಡವನ್ನು ಬದಲಾಯಿಸಬೇಕು.
ಆಯುಷ್ಮಾನ್ ಭಾರತ್ -ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ಸುಮಾರು 69 ಲಕ್ಷ ಬಡ ಕುಟುಂಬಗಳನ್ನು ಮಾತ್ರ ಫಲಾನುಭವಿಗಳಾಗಿ ಗುರುತಿಸಿ ನೆರವು ನೀಡುತ್ತಿದೆ. ಇದರಿಂದಾಗಿ ಆರೋಗ್ಯ ಕರ್ನಾಟಕ ಯೋಜನೆಯ ಶೇಕಡಾ 60ರಷ್ಟು ಕುಟುಂಬಗಳಿಗೆ ಮಾತ್ರ ಕೇಂದ್ರ ಸರ್ಕಾರ ಅನುದಾನ ನೀಡುವಂತಾಗಿದ್ದು ಉಳಿದ ಕುಟುಂಬಗಳ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕಾಗಿದೆ. ಆದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ 1.14 ಕುಟುಂಬಗಳನ್ನು ಫಲಾನುಭವಿಗಳೆಂದು ಗುರುತಿಸಿದೆ... ಈ ನಿಯಮಾವಳಿಗಳನ್ನು ಬದಲಾಯಿಸಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಫಲಾನುಭವಿಗಳಾಗಿರುವರೆಲ್ಲರಿಗೂ ಆರೋಗ್ಯ ಯೋಜನೆಯನ್ನು ವಿಸ್ತರಿಸಬೇಕು.
ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ಕರ್ನಾಟಕ ಸರ್ಕಾರ ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರು ರೂ.2,461.49 ಕೋಟಿ ಹಣವನ್ನು ಬಾಕಿ ಇರಿಸಿರುವುದರಿಂದಾಗಿ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಬೇಕಾಗಿದೆ. ಈ ಬಾಕಿ ಹಣವನ್ನು ಶೀಘ್ರ ಬಿಡುಗಡೆಗೊಳಿಸಬೇಕು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಗೌರವಧನ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಹಣ ಅತಿ ಕಡಿಮೆ ಮೊತ್ತದಾಗಿದ್ದು ಕಳೆದ ಕೆಲವು ವರ್ಷಗಳಿಂದ ಅದನ್ನು ಪರಿಷ್ಕರಿಸಿಲ್ಲ. ಈ ಪರಿಸ್ಥಿತಿಯಲ್ಲಿ ಕೇಂದ್ರದ ಪಾಲನ್ನು ರಾಜ್ಯ ಸರ್ಕಾರವೇ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದ ರಾಜ್ಯದ ಖಜಾನೆ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ರಾಜ್ಯದ ಅಂಗನವಾಡಿ ಕಾರ್ಯಕರ್ತರರಿಗೆ ಮಾಸಿಕ ರೂ,10000 ಗೌರವಧನ ನೀಡಲಾಗುತ್ತಿದ್ದು ಇದರಲ್ಲಿ ಕೇಂದ್ರದ ಪಾಲು 2700 ರೂಪಾಯಿ ಮಾತ್ರ. ಆಶಾ ಕಾರ್ಯಕರ್ತರಿಗೆ ನೀಡುವ 7000 ರೂ. ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲು ರೂ. 2000. ಅಂಗನವಾಡಿಯ ಅಡುಗೆ ಕೆಲಸಗಾರರು ಮತ್ತು ಸಹಾಯಕರಿಗೆ ರಾಜ್ಯ ಸರ್ಕಾರ ರೂ.3100 ವೇತನ ನೀಡುತ್ತಿದ್ದು ಇದರಲ್ಲಿ ಕೇಂದ್ರ ಸರ್ಕಾರ ಪಾಲು ರೂ.600 ಮಾತ್ರ. ಈ ಕಾರ್ಯಕರ್ತರ ವೇತನದ ಬಾಕಿಮೊತ್ತವನ್ನು ಭರಿಸುವುದು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ.ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ರೂ.5000ಕ್ಕೆ ಮತ್ತು ಅಡುಗೆ ಕೆಲಸಗಾರರು ಮತ್ತು ಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಕನಿಷ್ಠ ರೂ.5000 ಹೆಚ್ಚಿಸಬೇಕು.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯಡಿ ಕೇಂದ್ರ ಸರ್ಕಾರ ಪ್ರತಿಯೊಂದು ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ರೂ.1.50 ಲಕ್ಷ ಮತ್ತು ರಾಜ್ಯ ಸರ್ಕಾರ 1.80 ಲಕ್ಷ ಸಹಾಯ ಧನ ನೀಡುತ್ತಿದೆ. ಆದರೆ ಮನೆನಿರ್ಮಾಣ ವೆಚ್ಚ ವಿಪರೀತ ಏರಿಕೆಯಾಗುವುದರಿಂದ ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ್ಠ ಐದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.
ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) ಪ್ರತಿ ಮನೆಗೆ ಕೇಂದ್ರ ಸರ್ಕಾರ 72 ಲಕ್ಷ ರೂಪಾಯಿ ಮತ್ತು ರಾಜ್ಯ ಸರ್ಕಾರ 42 ಲಕ್ಷ ರೂಪಾಯಿ ಸಹಾಯಧನ ನೀಡುತ್ತಿದೆ. ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ‍್ಠ ಮೂರು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.
2023ರಲ್ಲಿ ಕರ್ನಾಟಕದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದ ಕಾರಣದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ ರೂ.35,162 ಕೋಟಿ ನಷ್ಟ ಉಂಟಾಗಿತ್ತು. ಇದಕ್ಕಾಗಿ ಕರ್ನಾಟಕ ರೂ.18,171 ಕೋಟಿ ಪರಿಹಾರ ಕೇಳಿದ್ದರೂ ಎನ್ ಡಿಆರ್ ಎಫ್ ನಿಂದ ಬಿಡುಗಡೆಯಾಗಿದ್ದು ಕೇವಲ ರೂ.3454 ಕೋಟಿ ಮಾತ್ರ. 2024ರಲ್ಲಿ ಅತಿವೃಷ್ಟಿಯಿಂದ ರಾಜ್ಯದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಆಗಿರುವ ಹಾನಿಗೆ ಎನ್ ಡಿಎಂಎಫ್ ನಿಂದ ಪರಿಹಾರ ಕೇಳಿದ್ದರೂ ಇಲ್ಲಿಯ ವರೆಗೆ ಚಿಕ್ಕಾಸು ಸಿಕ್ಕಿಲ್ಲ.
ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ (ಎನ್ ಡಿಆರ್ ಎಫ್) ಮತ್ತು ಎಸ್ ಡಿಆರ್ ಎಫ್ ನಿಧಿಗಳಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಷ್ಟಕ್ಕೆ ಸರಿಸಮನಾಗಿ ಪರಿಹಾರ ನೀಡಲು ಸಹಾಯವಾಗುವಂತೆ ಮತ್ತು ಪರಿಹಾರ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ತ್ವರಿತಗತಿಯಲ್ಲಿ ನಡೆಯುವಂತೆ ಎನ್ ಡಿಆರ್ ಎಫ್ ಅನ್ನು ಸುಧಾರಣೆಗೊಳಪಡಿಸಬೇಕು. ಪರಿಹಾರ ನೀಡಿಕೆಯ ಮಾನದಂಡಗಳನ್ನು ಬರಪೀಡಿತ ರಾಜ್ಯಗಳಿಗೆ ನೆರವಾಗುವ ರೀತಿಯಲ್ಲಿ ಪರಿಹಾರ ನೀಡಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಬೇಕು.
Advertisement