ಪ್ರವಾಸ, ಶುಭ ಕಾರ್ಯಕ್ಕೆ ಹೋಗುತ್ತಿದ್ದೀರಾ?: ಮನೆ ಬಗ್ಗೆ ಚಿಂತೆ ಬೇಡ, ಪೊಲೀಸ ಕಂಟ್ರೋಲ್ ರೂಮ್'ಗೆ ಕರೆ ಮಾಡಿ...
ಬೆಂಗಳೂರು: ಪ್ರವಾಸ, ಶುಭ ಸಮಾರಂಭ ಹಾಗೂ ಇನ್ನಿತರೆ ಉದ್ದೇಶಗಳಿಗಾಗಿ ಮನೆಯಿಂದ ಹೊರ ಹೋಗುತ್ತಿದ್ದೀರಾ. ಹಾಗಿದ್ದರೆ, ಮನೆಯ ಚಿಂತೆ ಬಿಡಿ. ಪೊಲೀಸ್ ಕಂಟ್ರೋಲ್ ರೂಮ್'ಗೆ ಕರೆ ಮಾಡಿ. ಏನಿದು ಎನ್ನುತ್ತೀರಾ... ಇಲ್ಲಿದೆ ಮಾಹಿತಿ...
ನಗರದ ದಕ್ಷಿಣ ವಿಭಾಗದ ಪೊಲೀಸರ ವತಿಯಿಂದ ಲಾಕಿಂಗ್ ಹೌಸ್ ಚೆಕ್ಕಿಂಗ್ ಸಿಸ್ಟಮ್ ಎಂಬ ವಿನೂತನ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ನೀವು ದಕ್ಷಿಣ ಬೆಂಗಳೂರಿನ ನಿವಾಸಿಗಳಾಗಿದ್ದರೆ ಮನೆಗೆ ಬೀಗ ಹಾಕಿಕೊಂಡು 2-3 ದಿನ ಪ್ರವಾಸ, ದೇವಸ್ಥಾನ, ಸಮಾರಂಭಗಳಿಗೆ ಹೋಗುವ ಸಂದರ್ಭದಲ್ಲಿ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಮನೆಯಲ್ಲಿ ಕಳ್ಳತನವಾಗುವ ಭಯವಿದ್ದರೆ ದಕ್ಷಿಣ ವಿಭಾಗದ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಬಹುದು.
ನಂತರ ಲಾಕ್ ಮಾಡಿರುವ ನಿಮ್ಮ ಮನೆಯ ಭಾವಚಿತ್ರ, ನಿಮ್ಮ ಮನೆಯ ಸಂಪೂರ್ಣ ವಿಳಾಸ, ಮೊಬೈಲ್ ನಂಬರ್ ಅನ್ನು ಕಳುಹಿಸಿದರೆ. ನೀವು ನೀಡಿದ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನೆ ಮಾಡಿ, ನಿಮ್ಮ ಮನೆಯ ಮೇಲೆ ಪೊಲೀಸರು ನಿಗಾವಹಿಸಲಿದ್ದಾರೆ. ಸಂಬಂಧಿಸಿದ ಠಾಣಾ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಅಂತಹ ಮನೆಗಳಿಗೆ ಭೇಟಿ ಕೊಟ್ಟು ನಿಗಾ ವಹಿಸಲಿದ್ದಾರೆ. ಇದರಿಂದ ಕಳ್ಳತನದಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಲಿದೆ.
ಅಪರಾಧ ಪತ್ತೆಗಿಂತ, ಅಪರಾಧ ನಡೆಯದಂತೆ ತಡೆಯುವುದು ಬಹಳ ಮುಖ್ಯ. ಪೊಲೀಸ್ ಆಯುಕ್ತರು ಬೀಗ ಹಾಕಿದ ಮನೆಗಳ ಮೇಲಿನ ನಿಗಾ ವ್ಯವಸ್ಥೆಯನ್ನು ಜಾರಿಗೊಳಿಸಲು ಸೂಚನೆ ನೀಡಿದ್ದರು. ಹೀಗಾಗಿ, ದಕ್ಷಿಣ ವಿಭಾಗದಲ್ಲಿಈಗಾಗಲೇ ಜಾರಿಗೊಳಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಲೋಕೇಶ್ ಬಿ.ಜಗಲಾಸರ್ ಅವರು ತಿಳಿಸಿದ್ದಾರೆ.
ಮನೆಗಳಿಗೆ ಬೀಗ ಹಾಕಿ ತೆರಳುವ ನಿವಾಸಿಗಳು ದಕ್ಷಿಣ ವಿಭಾಗದ ನಿಯಂತ್ರಣ ಕೊಠಡಿ ಸಂಖ್ಯೆ 080-22943111 ಅಥವಾ 9480801500 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಜತೆಗೆ, ಮನೆಯ ವಿಳಾಸ, ಫೋಟೊ ಹಾಗೂ ದೂರವಾಣಿ ಸಂಖ್ಯೆ ವಿವರ ನೀಡಬೇಕು. ಈ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ರವಾನಿಸಿ ರಾತ್ರಿ ಪಾಳಿ ಸೇರಿದಂತೆ ಪ್ರತಿನಿತ್ಯ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗುತ್ತದೆ.
ಅಂತಹ ಮನೆಗಳ ಬಳಿ ಬೀಟ್ ಸಿಬ್ಬಂದಿ ತೆರಳಿದ್ದರೇ? ನಿಗಾ ವಹಿಸಿದ್ದಾರೆಯೇ ಎಂಬುದನ್ನು ಆಯಾ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಎಸಿಪಿ ಕಡ್ಡಾಯವಾಗಿ ಪರಾಮರ್ಶಿಸಲಿದ್ದಾರೆ. ಈ ಮುಂಜಾಗ್ರತಾ ಕ್ರಮಗಳಿಂದ ಕಳವು ಪ್ರಕರಣಗಳನ್ನು ತಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.