
ಬೆಂಗಳೂರು: ಬೆಂಗಳೂರು ಪೂರ್ವದ ಪುಲಿಕೇಶಿ ನಗರ ವಾರ್ಡ್‌ನ ಪ್ರೊಮೆನೇಡ್ ರಸ್ತೆಯ ಸುಮಾರು 30ಕ್ಕೂ ಹೆಚ್ಚು ನಿವಾಸಿಗಳು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವುದಾಗಿ ಬುಧವಾರ ತಿಳಿದುಬಂದಿದೆ.
ಕಲುಶಿತ ನೀರು ಸೇವಿಸಿ ಕಳೆದೆರಡು ವಾರಗಳಿಂದ 30 ಮಂದಿ ಅಸ್ವಸ್ಥರಾಗಿದ್ದಾರೆ. ಈ ಸಂಬಂಧ ಸ್ಥಳೀಯರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (BWSSB) ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದ್ದು, ಇದೀಗ ಸ್ಥಳೀಯರು ಬಿಬಿಎಂಪಿ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದಾರೆ.
ಈ ವಿಚಾರ ತಿಳಿದ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಡಬ್ಲ್ಯೂಎಸ್ಎಸ್'ಬಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
ಪ್ರೊಮೆನೇಡ್ ರಸ್ತೆ ಮತ್ತು ಅಸ್ಸಾಯೆ ರಸ್ತೆಯ ಕನಿಷ್ಠ 30 ನಿವಾಸಿಗಳು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಎಲ್ಲರಲ್ಲೂ ಅತಿಸಾರ, ವಾಂತಿ ಮತ್ತು ನಿರ್ಜಲೀಕರಣ ಕಂಡು ಬಂದಿದೆ. ಬಳಿಕ ಅನುಮಾನಗೊಂಡಿರುವ ಸ್ಥಳೀಯರು ನೀರಿನ ಮಾದರಿಗಳನ್ನು ಬೆಂಗಳೂರು ಪೂರ್ವದ ಕಾಡುಗೊಂಡನಹಳ್ಳಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನೀಡಿದ್ದಾರೆ.
ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇ. ಕೋಲಿ ಮತ್ತು ಕ್ಲೆಬ್ಸಿಲ್ಲಾ ನ್ಯುಮೋನಿಯಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಕಂಡುಬಂದಿವೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬಳಿಕ ನಿವಾಸಿಗಳು ಸ್ಥಳೀಯ ಬಿಡಬ್ಲ್ಯೂಎಸ್ಎಸ್ಬಿ ಎಇಇ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಅಧಿಕಾರಿ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಧಿಕಾರಿ ಮೊದಲು ನೀರು ಸರಬರಾಜನ್ನು ನಿಲ್ಲಿಸಿ, ಒಳಚರಂಡಿ ಸೋರಿಕೆಯನ್ನು ಪರಿಶೀಲಿಸಬೇಕಾಗಿತ್ತು. ಆದರೆ, ನಿರ್ಲಕ್ಷ್ಯ ತೋರಿದರು.
ಬಿಡಬ್ಲ್ಯೂಎಸ್ಎಸ್ಬಿ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡುವುದರೆ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಕಾಲರಾ, ಗ್ಯಾಸ್ಟ್ರೋಎಂಟರೈಟಿಸ್ ಮತ್ತು ಇತರ ಕಾಯಿಲೆಗಳು ಹರಡುತ್ತವೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
Advertisement