ಬೆಂಗಳೂರು: ನಗರದ ರಾಂಪುರ ಹಾಗೂ ಬಸವನ ಕೆರೆಗೆ ಕಲುಷಿತ ನೀರು ಸೇರಿದ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವಾಗಿದೆ.
ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿದ್ದು, ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು ಅಧಿಕಾರಿಗಳ ದುರ್ನಡತೆಯ ಕಂಡು ಹಿಡಿಶಾಪ ಹಾಕಿದರು.
ಕಲ್ಕೆರೆ ಸೇರಿದಂತೆ ಮೇಲ್ಭಾಗದ ಕೆರೆಗಳಿಂದ ಮಾಲಿನ್ಯಕಾರಕಗಳು ರಾಂಪುರ ಕೆರೆಗೆ ಸೇರಿವೆ, ಇದರ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಅದೇ ರೀತಿ ಬಸವನಪುರ ಕೆರೆ ನೀರೂ ಕಲುಷಿತಗೊಂಡು ನೂರಾರು ಮೀನುಗಳು ಸತ್ತಿವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಎರಡೂ ಕೆರೆಗಳ ನೀರು ಹಾಗೂ ಸತ್ತ ಮೀನುಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಕೆರೆ ಸ್ವಚ್ಛತೆಗೆ ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆರೆ ವಿಭಾಗದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ಮಹದೇವಪುರ ವಲಯ), ಭೂಪ್ರದಾ ಮಾತನಾಡಿ, ರಾಂಪುರ ಕೆರೆಯು ಹೆಬ್ಬಾಳದ ಕೆಳಭಾಗದಲ್ಲಿದೆ. ಉತ್ತರ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ, ಮಾಲಿನ್ಯಕಾರಕಗಳು ಕೆರೆ ಸೇರಿದೆ. ಇದರ ಪರಿಣಾಮ ಮೀನುಗಳು ಸಾವನ್ನಪ್ಪಿವೆ ಎಂದು ಹೇಳಿದ್ದಾರೆ.
ಬಸವನಪುರ ಕೆರೆಯಲ್ಲಿಯೂ ಮೀನುಗಳು ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ. ಕೆರೆಯ ಬದಿಯಲ್ಲಿ ಸುಮಾರು 100 ಮೀಟರ್ ಚರಂಡಿ ಪೈಪ್ ಸಂಪರ್ಕ ಕಾಮಗಾರಿ ಇನ್ನೂ ಬಾಕಿ ಇದ್ದು, ನೆಲದಡಿ ಬಂಡೆಗಳಿರುವ ಕಾರಣ ಒಳಚರಂಡಿ ಮಾರ್ಗದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement