
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನವನಗಳಲ್ಲಿನ ಬೋರ್‌ವೆಲ್‌ಗಳ ಸ್ಥಿತಿ-ಗತಿಗಳ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ಇ-ಖಾತಾ, ಉದ್ಯಾನವನಗಳು, ಕೆರೆಗಳು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಪಾಲಿಕೆ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಬೋರ್‌ವೆಲ್‌ಗಳು ಉತ್ತಮ ಸ್ಥಿತಿಯಲ್ಲಿರುವ ಉದ್ಯಾನವನಗಳಲ್ಲಿ ತಕ್ಷಣವೇ ನೀರು ಸರಬರಾಜು ಮಾಡಬೇಕು. ಈ ನಿಟ್ಟಿನಲ್ಲಿ, ಉದ್ಯಾನವನಗಳಲ್ಲಿನ ಸಸಿಗಳು/ಮರಗಳಿಗೆ ಟ್ಯಾಂಕರ್‌ಗಳ ಮೂಲಕ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಿದ ನೀರನ್ನು ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು, ಉದ್ಯಾನವನಗಳು, ಕೆರೆಗಳು ಮತ್ತು ಸಸಿಗಳು/ಮರಗಳಿಗೆ ನೀರಿನ ಅಗತ್ಯವಿದೆ. ಈ ನಿಟ್ಟಿನಲ್ಲಿ, ಅಗತ್ಯವಿರುವ ನೀರಿನ ಪ್ರಮಾಣ ಮತ್ತು ಅಗತ್ಯವಿರುವ ಟ್ಯಾಂಕರ್‌ಗಳ ಸಂಖ್ಯೆಯನ್ನು ತಕ್ಷಣವೇ ಪಟ್ಟಿ ಮಾಡಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ನಗರದಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಬಹಳಷ್ಟು ಮರ-ಗಿಡಗಳ ಎಲೆಗಳು ಉದುರುತ್ತಿವೆ. ಎಲ್ಲೆಡೆ ಒಣಗಿದ ಎಲೆಗಳ ರಾಶಿಗಳಿವೆ. ಈ ನಿಟ್ಟಿನಲ್ಲಿ, ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ, ಎಲೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದರು.
ನಗರದಲ್ಲಿ 1,280 ಉದ್ಯಾನವನಗಳಿದ್ದು, ಅವುಗಳಲ್ಲಿ 100 ಉದ್ಯಾನವನಗಳಲ್ಲಿ ಎಲೆ ಗೊಬ್ಬರ ಘಟಕಗಳನ್ನು (ಎಲೆಗಳ ಗೊಬ್ಬರ ಯಂತ್ರಗಳು) ಸ್ಥಾಪಿಸಲಾಗುತ್ತಿದೆ. ಈ ಕುರಿತ ಕಾಮಗಾರಿ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ನಂತರ, ಉದ್ಯಾನವನಗಳಲ್ಲಿ ಸಸಿಗಳು/ಮರಗಳಿಂದ ಬೀಳುವ ಎಲೆಗಳನ್ನು ಸ್ಥಳದಲ್ಲೇ ಗೊಬ್ಬರವಾಗಿಸಿ ಉದ್ಯಾನವನಗಳಲ್ಲಿ ಸಸಿಗಳು ಮತ್ತು ಮರಗಳನ್ನು ಬೆಳೆಸಲು ಗೊಬ್ಬರವಾಗಿ ಬಳಸಲಾಗುತ್ತದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
Advertisement