
ಬೆಂಗಳೂರು: ಒಣಹುಲ್ಲು ಸುಟ್ಟರೆ ಹೊಸ ಚಿಗುರು ಬರುತ್ತದೆ. ಮೇಕೆಗಳಿಗೆ ಮೇವು ಸಿಗುತ್ತದೆಂದು ವ್ಯಕ್ತಿಯೊಬ್ಬ ಅರಣ್ಯ ಪ್ರದೇಶದ ಒಣ ಹುಲ್ಲಿಗೆ ಬೆಂಕಿ ಇಟ್ಟ ಪರಿಣಾಮ ಸುಮಾರು 10 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿರುವ ಘಟನೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ನಡೆದಿದೆ.
ರಾಜಪ್ಪ (42) ಎಂಬಾತ ತನ್ನ ಮೇಕೆಗಳನ್ನು ಮೇಯಿಸಲು ಸಂಗಮ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ತೆರಳಿದ್ದನು. ಈ ವೇಳೆ ಅರಣ್ಯದಲ್ಲಿದ್ದ ಒಣಹುಲ್ಲು ನೋಡಿದ ಆತ, ಇದನ್ನು ಸುಟ್ಟರೆ ಹೊಸ ಹುಲ್ಲು ಚಿಗುರುತ್ತದೆ, ಕುರಿ-ಮೇಕೆಗಳಿಗೆ ಮೇವು ಲಭ್ಯವಾಗುತ್ತದೆ ಎಂದು ಬೆಂಕಿ ಹಚ್ಚಿದ್ದಾನೆ. ಪರಿಣಾಮ 10 ಎಕರೆ ಅರಣ್ಯ ಪ್ರದೇಶ ನಾಶವಾಗಿದೆ.
ಈ ನಡುವೆ ಅಗ್ನಿ ಅವಘಡ ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಅದಾಗಲೇ 10 ಎಕರೆ ಅರಣ್ಯ ಭಸ್ಮವಾಗಿತ್ತು. ಈ ಅವಘಡದಲ್ಲಿ ಕೆಲವು ವನ್ಯಜೀವಿಗಳು ಸಹ ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲೇ ರಾಜಪ್ಪ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಬೆಂಕಿ ಹಚ್ಚಿದುದನ್ನು ಒಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ.
ಈ ಸಂಬಂಧ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
Advertisement