
ಬೆಂಗಳೂರು: ನಗರದ ರಾಜರಾಜೇಶ್ವರಿ ನಗರ ಹಾಗೂ ಪೂರ್ವ ವಲಯದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಪಾದಚಾರಿ ಮಾರ್ಗಗಳ ಒತ್ತುವರಿ ಹಾಗೂ ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿದೆ.
ಅಂಗಡಿ-ಮುಂಗಟ್ಟುಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಪಾಲಿಕೆಗೆ ಹಲವರು ದೂರುಗಳನ್ನು ನೀಡಿದ್ದರು.
ದೂರು ಹಿನ್ನೆಲಯೆಲ್ಲಿ ಪೂರ್ವ ವಲಯದ ಸಿ. ವಿ. ರಾಮನ್ ನಗರ ವ್ಯಾಪ್ತಿಯ ವಾರ್ಡ್ ಸಂಖ್ಯೆ 109, ಹಳೇ ವಾರ್ಡ್ ಸಂಖ್ಯೆ 50 ರ ಕಸ್ತೂರಿನಗರದ 2ನೇ ಮುಖ್ಯರಸ್ತೆಯಲ್ಲಿ ಪಾದಚಾರಿ ರಸ್ತೆಗಳ ಮೇಲಿದ್ದ ತಳ್ಳುವ ಗಾಡಿಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.
ಇದೇ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ಸಹ ತೆರವುಗೊಳಿಸಲಾಗಿದ್ದು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಎಂಜಿನಿಯರ್‌ಗಳು, ಆರೋಗ್ಯ ಪರಿವೀಕ್ಷಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಈ ನಡುವೆ ಕಾರ್ಯಾಚರಣೆ ವೇಳೆ ನಿಯಮ ಉಲ್ಲಂಘಿಸಿ ಪಾದಚಾರಿ ಮಾರ್ಗಗಳ ಪದೇ ಪದೇ ಒತ್ತುವರಿ ಮಾಡಿಕೊಳ್ಳುವ, ಸಾರ್ವಜನಿಕರಿಗೆ ತೊಂದರೆಗಳನ್ನು ನೀಡುವ ವ್ಯಾಪಾರಿಗಳ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೇ ರೀತಿ ಅಕ್ರಮ ಬ್ಯಾನರ್ ಹಾಕುವವರಿಗೆ ದಂಡ ವಿಧಿಸುವಂತೆ ವಾರ್ಡ್ ಎಂಜಿನಿಯರ್ ಗಳಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
Advertisement