
ಬೆಂಗಳೂರು: 25 ದಿನಗಳ ಹಸುಗೂಸು ಭಯಭೀತಗೊಂಡು ಅಳುತ್ತಲಿದ್ದು ಪಟಾಕಿ ಸಿಡಿಸದಂತೆ ಮನವಿ ಮಾಡಿಜದ ವ್ಯಕ್ತಿಗೆ ನೆರೆಹೊರೆಯವರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಟಿ.ದಾಸರಹಳ್ಳಿಯಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಟಿ. ದಾಸರಹಳ್ಳಿಯ ಪ್ರಶಾಂತ್ ನಗರದ ನಿವಾಸಿ ಪಿ.ಆರ್. ನವೀನ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಂಗಳವಾರ ರಾತ್ರಿ 11.30 ರಿಂದ 11.59 ರ ನಡುವೆ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಟಾಕಿ ಸಿಡಿತದ ಶಬ್ಧಕ್ಕೆ ಮಗು ಅಳಲು ಆರಂಭಿಸಿತ್ತು. ಹೀಗಾಗಿ ಪಟಾಕಿ ಸಿಡಿಸದಂತೆ ಮನವಿ ಮಾಡಿಕೊಂಡಿದ್ದೆ. ಕಳೆದ 18 ತಿಂಗಳುಗಳಿಂದ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಿದವರು ಇಲ್ಲಿನ ಸ್ವಂತ ಮನೆ ಹೊಂದಿರುವವರಾಗಿದ್ದಾರೆ. ನಾಲ್ವರು ಮಹಿಳೆಯರು ಸೇರಿದಂತೆ 7 ಮಂದಿ ನನ್ನ ಮೇಲ ಹಲ್ಲೆ ನಡೆಸಿದ್ದು, ನನ್ನ ಹೆಬ್ಬರಳಿನ ಮೂಳೆ ಮುರಿತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಘಟನೆ ವೇಳೆ ನನ್ನ ನೆರವಿಗೆ ಬಂದ ನನ್ನ ಅತ್ತೆಗೂ ಆರೋಪಿಗಳು ಥಳಿಸಿದ್ದಾರೆಂದು ಕುಮಾರ್ ಅವರು ಹೇಳಿದ್ದಾರೆ.
7 ಮಂದಿಯ ಪೈಕಿ ಕೆಲವರು ಘಟನೆ ವೇಳೆ ಮದ್ಯದ ಅಮಲಿನಲ್ಲಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಬಿಎನ್‌ಎಸ್ 115(2) ಜೊತೆಗೆ ಬಿಎನ್‌ಎಸ್‌ನ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement