
ಬೆಂಗಳೂರು: ನಮ್ಮಂತಹ ರಾಜಕಾರಣಿಗಳು ರಾಜಕೀಯ ಉದ್ದೇಶಕ್ಕೆ ಪೊಲೀಸರನ್ನು ಬಳಸಿಕೊಳ್ಳಬಾರದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದರು.
ಪುಲಿಕೇಶಿನಗರದಲ್ಲಿ ಪೊಲೀಸರ ವಸತಿ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಈ ಹಿಂದೆ ಸಿಎಂ ಮತ್ತು ಗೃಹ ಸಚಿವರ ಸಮ್ಮುಖದಲ್ಲೇ ಡಿಜೆ ಅವರಿಗೆ ಗದರಿದ್ದೆ. ಕಾರಣ ಉಡುಪಿ ಮತ್ತು ವಿಜಯಪುರದಲ್ಲಿ ಪೊಲೀಸರು ಬಿಜೆಪಿ ಶಾಲು ಧರಿಸಿದ್ದರು. ನಮ್ಮಂತಹ ರಾಜಕಾರಣಿಗಳು ನಿಮ್ಮನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬುದು ನನ್ನ ಸಲಹೆಯಾಗಿದೆ ಎಂದರು.
ನಿಮ್ಮ ಕರ್ತವ್ಯ, ಸಮವಸ್ತ್ರ, ಘನತೆಗೆ ಯಾವತ್ತೂ ಕಳಂಕ ಬರಬಾರದು. ರಾಜಕಾರಣಿಗಳು ಇವತ್ತು ಬರುತ್ತೇವೆ. ನಾಳೆ ಹೋಗುತ್ತೇವೆ. ಆದರೆ, ನಿಮ್ಮ ಖಾಕಿ ಹಾಗೂ ಅದರ ಖದರ್, ಶಿಸ್ತು, ಪೊಲೀಸರಿಗೆ ಇರುವ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು. ಜನ ನಿಮ್ಮ ಬಳಿ ನ್ಯಾಯ ಪಡೆಯಲು ಬರುತ್ತಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ನಿಮ್ಮಿಂದ ಯಶಸ್ವಿಯಾಗಲಿ ಎಂದು ತಿಳಿಸಿದರು.
988ರಲ್ಲಿ ವಿಶ್ವ ಯೂಥ್ ಅಂಡ್ ಸ್ಟೂಡೆಂಟ್ ಫೆಸ್ಟಿವಲ್ ಸಮ್ಮೇಳನಕ್ಕಾಗಿ ಪ್ಯೊಂಗ್ಯಾಂಗ್ ಗೆ ತೆರಳಿದ್ದ ವೇಳೆ ಆದ ಅನುಭವವನ್ನು ಹಂಚಿಕೊಂಡ ಡಿಕೆ ಶಿವಕುಮಾರ್, ಸೀತರಾಮ್ ಯೆಚೂರಿ ಹಾಗೂ ತಿವಾರಿ ಜೊತೆಗೆ ನಡೆದು ಹೋಗುತ್ತಿದ್ದಾಗ ಅಲ್ಲಿನ ದೊಡ್ಡ ವೃತ್ತದ ಬಳಿ ಸಂಚಾರಿ ದಟ್ಟಣೆ ಇತ್ತು. ಆಗ ಕೇವಲ ಓರ್ವ ಮಹಿಳಾ ಟ್ರಾಫಿಕ್ ಸಿಬ್ಬಂದಿ ಅದನ್ನು ನಿಭಾಯಿಸುತ್ತಿದ್ದರು. ಕುತೂಹಲದಿಂದ ಆಕೆಯನ್ನು ಕರೆದು ನಿಮ್ಮ ವೇತನವೆಷ್ಟು ಎಂದು ಕೇಳಿದೆ. ಅದಕ್ಕೆ ಆಕೆ ಕೋಪಗೊಂಡಳು. ನಾನು ವೇತನಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ನನ್ನ ದೇಶಕ್ಕಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಉತ್ತರಿಸಿದಳು.
ಎಲ್ಲರೂ ಬದುಕು ನಡೆಸಲು ಕೆಲಸ ಮಾಡುತ್ತಾರೆ. ಆದರೆ ಪ್ರತಿಯೊಬ್ಬ ಪೊಲೀಸರು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಜನ ಅವರ ಮೇಲೆ ಅಪಾರವಾದ ನಂಬಿಕೆ ಇಡುತ್ತಾರೆ. ಅದನ್ನು ನೀವು ಉಳಿಸಿಕೊಳ್ಳಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನಮ್ಮ ಸಚಿವ ಸಂಪುಟವು ಅತ್ಯಂತ ಅನುಭವಿಯಾಗಿದೆ. ನಮ್ಮಲ್ಲಿ ನಾಲ್ವರು ಮಾಜಿ ಗೃಹ ಸಚಿವರಿದ್ದಾರೆ - ಜಿ.ಪರಮೇಶ್ವರ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಮತ್ತು ರಾಮಲಿಂಗಾ ರೆಡ್ಡಿ - ಇವರು ಇಲಾಖೆಗೆ ಹೊಸ ರೂಪ ನೀಡಿದ್ದಾರೆ. ಪರಮೇಶ್ವರ ಅವರು ನೀಡಿದ ನಿರ್ದೇಶನ ಅನುಸರಿಸಿ ಕೆಲಸ ಮಾಡಿ ಎಂದು ಸೂಚಿಸಿದ ಡಿಕೆ ಶಿವಕುಮಾರ್, ಪರಮೇಶ್ವರ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಇಂದು ಸುವರ್ಣ ದಿನ. ಮುಖ್ಯಮಂತ್ರಿಗಳು ತಮ್ಮ ಇಡೀ ದಿನವನ್ನು ಇಲಾಖೆಗೆ ಮೀಸಲಿಟ್ಟಿದ್ದಾರೆ. ರಾಜ್ಯವು ಈಗ ಕೆಲವು ಅತ್ಯುತ್ತಮ ವಸತಿ ಸೌಲಭ್ಯಗಳನ್ನು ನೀಡುತ್ತಿದ ಎಂದು ಶ್ಲಾಘಿಸಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇಲಾಖೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಪೊಲೀಸರು ಪರಿಣಾಮಕಾರಿ ಸೇವೆಗಳನ್ನು ನೀಡುವುದನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.
Advertisement