ತಿರುಪತಿ ಕಾಲ್ತುಳಿತ ಪ್ರಕರಣ: ಬಳ್ಳಾರಿ ಮೂಲದ ಮಹಿಳೆ ಸಾವು
ಬೆಂಗಳೂರು: ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 6 ಮಂದಿಯ ಪೈಕಿ ಓರ್ವರನ್ನು ಬಳ್ಳಾರಿ ಮೂಲದ ಮಹಿಳೆ ಎಂದು ಗುರ್ತಿಸಲಾಗಿದೆ.
ಮೃತರನ್ನು ಬಳ್ಳಾರಿ ಮೂಲದ ನಿರ್ಮಲಾ (50) ಎಂದು ಗುರುತಿಸಲಾಗಿದೆ. ಉಳಿದ 5 ಮಂದಿ ಮೃತರನ್ನು ವೈಜಾಗ್‌ನ ರಜನಿ (47), ವೈಜಾಗ್‌ನ ಲಾವಣ್ಯ (40), ವೈಜಾಗ್‌ನ ಶಾಂತಿ (30), ಸೇಲಂನ ಮಲ್ಲಿಕಾ (49) ಹಾಗೂ ನರಸಿಪಟ್ಟಣದ ನಾಯ್ಡು ಬಾಬು (59) ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರದಿದೆ,
ಗುರುವಾರ (ಜ.8) ಬೆಳಗ್ಗೆ 5 ಗಂಟೆಯಿಂದ ಶ್ರೀನಿವಾಸಂ, ಸತ್ಯನಾರಾಯಣಪುರಂ ಮತ್ತು ಬೈರಾಗಿಪಟ್ಟೆಡ ಸೇರಿದಂತೆ 9 ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 94 ಕೌಂಟರ್‌ಗಳ ಮೂಲಕ ವೈಕುಂಠ ದ್ವಾರ ದರ್ಶನ ಟಿಕೆಟ್ ನೀಡಲು ಟಿಟಿಡಿ ಯೋಜಿಸಿತ್ತು. ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಈ ನಡುವೆ ಟಿಕೆಟ್ ಕೌಂಟರ್ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಹೊರಗೆ ಕರೆದೊಯ್ಯಲು ಗೇಟ್ ತೆರೆದಾಗ ಹೊರಗಿದ್ದವರೆಲ್ಲರೂ ಗುಂಪು ಗುಂಪಾಗಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ.
ನೆರವು ನೀಡುವಂತೆ ರಾಹುಲ್ ಗಾಂಧಿ ಆಗ್ರಹ
ಈ ನಡುವೆ ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ತೀವ್ರ ದುಃಖ ತಂದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ತಿರುಪತಿಯಲ್ಲಿ ಸಂಭವಿಸಿದ ದುರಂತ ತೀವ್ರ ದುಃಖವನ್ನುಂಟುಮಾಡಿದೆ. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಧ್ಯವಿರುವ ಎಲ್ಲಾ ನೆರವು ನೀಡಿ’ ಎಂದು ಹೇಳಿದ್ದಾರೆ.
ಇನ್ನು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಭೇಟಿ ನೀಡಲಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ