
ಬೆಂಗಳೂರು: ಹುಟ್ಟುಹಬ್ಬ ಆಚರಿಸಿಕೊಂಡು ಚಿಕ್ಕಪ್ಪನ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಾಲಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರಣ ಘಟನೆ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಆಂಧ್ರ ಪ್ರದೇಶದ ಚಿತ್ತೂರು ಮೂಲದ ಭಾನುತೇಜ (12) ಮೃತ ಬಾಲಕ. ಬಾಲಕನ ಚಿಕ್ಕಪ್ಪ ಚಕ್ರವರ್ತಿಗೆ ಸಣ್ಣ ಪ್ರಮಾಣದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶನಿವಾರ ರಾತ್ರಿ 11.30 ರ ಸುಮಾರಿಗೆ ಹುಳಿಮಾವುದಿಂದ ಆರ್‌ಟಿ ನಗರಕ್ಕೆ ಹೋಗುತ್ತಿದ್ದಾಗ, ಹೆಣ್ಣೂರು ಬಂಡೆ ಮುಖ್ಯರಸ್ತೆಯ ಬಳಿ ವೇಗವಾಗಿ ಬಂದ ಟ್ರಕ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕ ಹುಟ್ಟುಹಬ್ಬ ಆಚರಣೆಗಾಗಿ ತನ್ನ ಚಿಕ್ಕಪ್ಪನ ಮನೆಗೆ ಭೇಟಿ ನೀಡಿದ್ದ. ಊಟದ ಬಳಿಕ ಚಿಕ್ಕಪ್ಪನೊಂದಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದ. ಕಳೆದ ಕೆಲ ತಿಂಗಳುಗಳಿಂದ ಬಾಲಕ ಇದೇ ದೇವಾಲಯದಲ್ಲಿದ್ದುಕೊಂಡು ವೇದಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಟ್ರಕ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಹೆಣ್ಣೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement