
ಬೆಂಗಳೂರು: ಟಿಕೆಟ್ ಮಷಿನ್'ನ್ನು ಖಾಸಗಿ ವ್ಯಕ್ತಿಗೆ ಕೊಟ್ಟು ಪ್ರಯಾಣಿಕರಿಗ ಟಿಕೆಟ್ ವಿತರಣೆ ಮಾಡಿದ ಕೆಎಸ್ಆರ್‌ಟಿಸಿ ಬಸ್ ಚಾಲಕ/ನಿರ್ವಾಹಕನೋರ್ವನನ್ನು ಅಮಾನತು ಮಾಡಲಾಗಿದೆ.
ಜನವರಿ 14 ರಂದು ಕನಕಪುರ ಸಮೀಪದ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಕ್ರಾಂತಿ ಹಬ್ಬದ ದಿನ ಸಂಜೆ 4 ಗಂಟೆ ಸುಮಾರಿಗೆ ನವೀನ್ ಟಿಎನ್ ಎಂಬಾತ ತನ್ನ ಸ್ನೇಹಿತ ರೇವಂತ್ ಗೌಡಗೆ ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್ (ಇಟಿಎಂ) ಕೊಟ್ಟು, ಪ್ರಯಾಣಿಕರಿಗೆ ಟಿಕೆಟ್ ವಿತರಿಸಿ, ಹಣ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದಾನೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ವಿಡಿಯೋದಲ್ಲಿ ಟಿಕೆಟ್ ವಿತರಣೆ ಮಾಡುತ್ತಿದದ ವ್ಯಕ್ತಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ, ಪುರುಷರು ಹಣ ಕೊಟ್ಟರೂ ಟಿಕೆಟ್ ನೀಡದೇ ರಾಜರೋಷವಾಗಿ ಅಧಿಕಾರಿಗಳಿಗೆ ಮಾಮೂಲಿ ಕೊಡುತ್ತೇವೆ ನಮ್ಮ ಬಸ್ ಚೆಕ್ಕಿಂಗ್ ಮಾಡಲು ಯಾರೂ ಬರಲ್ಲ ಎಂದು ಹೇಳಿರುವುದು ಕಂಡು ಬಂದಿದೆ.
ಪ್ರಯಾಣಿಕನೋರ್ವ ಈ ಕುರಿತ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಈ ವಿಚಾರ ಕೆಎಸ್‌ಆರ್‌ಟಿಸಿ ಉನ್ನತಾಧಿಕಾರಿಗಳು ವಿಭಾಗದ ಗಮನಕ್ಕೆ ಬಂದಿದ್ದು, ಈ ಸಂಬಂಧ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ನವೀನ್ ಅವರು ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿದ್ದಾರೆ, ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿ, ವಂಚಿಸಿದ್ದಾರೆ ಮತ್ತು ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೋಡಿಹಳ್ಳಿಯಿಂದ ಕನಕಪುರಕ್ಕೆ ಟಿಕೆಟ್ ದರ ರೂ. 23 ಆಗಿದೆ. ನವೀನ್ ಅವರು ಸಂಸ್ಥೆಯ ಇಟಿಎಂ ಯಂತ್ರವನ್ನು ಅನಧಿಕೃತ ಖಾಸಗಿ ವ್ಯಕ್ತಿಗೆ ನೀಡಿ ವಾಹನದಲ್ಲಿದ್ದ ಪ್ರಯಾಣಿಕರಿಗೆ ಟಿಕೆಟ್ ವಿತರಿಸುವಂತೆ ಮಾಡಿ ಅಪರಾಧ ಎಸಗಿದ್ದಾರೆ. ಇವರ ವಿರುದ್ಧ ಸೆಕ್ಷನ್ 157 ಸಿಆರ್‌ಪಿಸಿ ಅಡಿ (ಕ್ರಿಮಿನಲ್ ಪ್ರಕರಣ)ಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಮನಗರ ವಿಭಾಗದ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಚಾಲಕನನ್ನು ಅಮಾನತು ಮಾಡಲಾಗಿದ್ದು, ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಇದೀಗ ಆತ ಯಾವುದೇ ಪರ್ಯಾಯ ಉದ್ಯೋಗ ಪಡೆಯಲು ಸಾದ್ಯವಿಲ್ಲ. ಇಲಾಖಾ ವಿಚಾರಣೆ ಮುಗಿದು, ಅಮಾನತು ಹಿಂತೆಗೆದುಕೊಳ್ಳುವವರೆಗೆ ಅರ್ಧದಷ್ಟು ವೇತನವನ್ನು ಮಾತ್ರ ಪಡೆಯುತ್ತಾರೆಂದು ಹೇಳಿದ್ದಾರೆ.
ಇಟಿಎಂ ಬಳಸಿದ ರೇವಂತ್‌ಗೌಡ ಕೆಎಸ್‌ಆರ್‌ಟಿಸಿಯಲ್ಲಿ ಆರು ತಿಂಗಳಿನಿಂದ ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಿಯಮಗಳ ಅರಿವಿಲ್ಲದೆ ನವೀನ್‌ಗೆ ಸಹಾಯ ಮಾಡಿದ್ದಾನೆ. ನವೀನ್ ತನ್ನ ಸ್ನೇಹಿತನಿಗೆ ಇಟಿಎಂ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ
Advertisement