
ಬೆಂಗಳೂರು: ಬೆಂಗಳೂರಲ್ಲಿ ಅಮೆರಿಕಾ ರಾಯಭಾರ ಕಚೇರಿ ಸ್ಥಾಪನೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.
ಬೆಂಗಳೂರಲ್ಲಿ ಅಮೆರಿಕಾ ರಾಯಭಾರ ಕಚೇರಿ ಸ್ಥಾಪನೆಗೆ ನಾವೇ ಕಾರಣ ಎಂಬ ಬಿಜೆಪಿ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಕಾನ್ಸುಲೇಟ್‌ಗಳನ್ನು ಸ್ಥಾಪಿಸುವ ನಿರ್ಧಾರವನ್ನು ಆಯಾ ಸರ್ಕಾರಗಳು ನಗರದ ಆರ್ಥಿಕ ಪ್ರಾಮುಖ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳುತ್ತವೆಯೇ ಹೊರತು ಬಿಜೆಪಿ ಸಂಸದರು ಅಥವಾ ವಿದೇಶಾಂಗ ಸಚಿವರ ಇಚ್ಛೆ ಅಥವಾ ವೈಯಕ್ತಿಕ ಆದ್ಯತೆಗಳ ಮೇಲೆ ಅಲ್ಲ ಎಂದು ಹೇಳಿದ್ದಾರೆ.
38 ವರ್ಷಗಳ ಕಾಲ ಅಧಿಕಾರಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಜೈಶಂಕರ್ ಅವರು ಇದನ್ನು ಒಪ್ಪುತ್ತಾರೆಂಬ ವಿಶ್ವಾಸ ನನಗಿದೆ. ಅಮೆರಿಕಾ ಮತ್ತು ಭಾರತಕ್ಕೆ ಪರಸ್ಪರ ಲಾಭದಾಯಕವಾದ ಹೂಡಿಕೆಗಳು ಮತ್ತು ವ್ಯಾಪಾರಕ್ಕಾಗಿ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯನ್ನು ಗಮನಿಸಿದರೆ, ಅಮೆರಿಕಾ ರಾಯಭಾರ ಕಚೇರಿ ಸ್ಥಾಪನೆಗೆ ಬೆಂಗಳೂರು ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ರಾಯಭಾರ ಕಚೇರಿ ವಿಚಾರವಾಗಿ ಬಿಜೆಪಿ ಸಂಸದರು ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರಸ್ತುತ ಇದು ಅಮೆರಿಕನ್ನರಿಗೆ ಮಾತ್ರ ಸೇವೆ ಸಲ್ಲಿಸುತ್ತದೆ. ವೀಸಾ ಸೇವೆ ಪ್ರಕ್ರಿಯೆ ಆರಂಭಕ್ಕೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪ್ರಯತ್ನದಿಂದಾಗಿ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಸ್ಥಾಪನೆ ಸಾಧ್ಯವಾಯಿತು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಈ ಹಿಂದೆ ಹೇಳಿಕೆ ನೀಡಿದ್ದರು.
Advertisement