
ಬೆಂಗಳೂರು: ವಿಚ್ಛೇದನದ ಅರ್ಜಿಯನ್ನು ಹಿಂಪಡೆಯಲು ಪತ್ನಿ ನಿರಾಕರಿಸಿದ್ದರಿಂದ ಮನನೊಂದ ಪತಿಯೊಬ್ಬ ಆಕೆಯ ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಗರದ ನಾಗರಭಾವಿ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಮೃತರನ್ನು ತುಮಕೂರಿನ ಕುಣಿಗಲ್ ಪಟ್ಟಣದ ನಿವಾಸಿ 39 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಅವರು ಕ್ಯಾಬ್ ಚಾಲಕನಾಗಿದ್ದರು. ಮಂಜುನಾಥ್ 2013ರಲ್ಲಿ ವಿವಾಹವಾಗಿದ್ದರು ಮತ್ತು ನಂತರ ಬೆಂಗಳೂರಿನ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ದಂಪತಿಗೆ 9 ವರ್ಷದ ಗಂಡು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ ಮಂಜುನಾಥ್ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಇಬ್ಬರೂ ವಿಚ್ಛೇದನ ಪಡೆಯಲು ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ಮಧ್ಯೆ, ವಿಚ್ಛೇದನ ಅರ್ಜಿಯನ್ನು ಹಿಂಪಡೆಯುವಂತೆ ಮಂಜುನಾಥ್ ಪತ್ನಿ ಬಳಿ ಕೇಳಿದ್ದರು. ಅದೇ ವಿಚಾರವಾಗಿ ಮನವೊಲಿಸಲು ಪತ್ನಿಯ ನಿವಾಸಕ್ಕೆ ಬಂದಿದ್ದರು. ಅರ್ಜಿ ಹಿಂಪಡೆಯಲು ಪತ್ನಿ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಮನನೊಂದ ಮಂಜುನಾಥ್ ಆಕೆಯ ಮನೆಯ ಕಾರಿಡಾರ್ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬಳಿಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಗನ ಸಾವಿಗೆ ಆತನ ಪತ್ನಿಯೇ ಕಾರಣ ಎಂದು ಮಂಜುನಾಥ್ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಎಂಬಾತ ತನ್ನ ಪತ್ನಿ ನಿಕಿತಾ ಸಿಂಘಾನಿಯಾ ವಿಚ್ಛೇದನದ ಇತ್ಯರ್ಥಕ್ಕೆ ಚಿತ್ರಹಿಂಸೆ ನೀಡಿ ಮೂರು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದರು.
Advertisement