
ಬೆಂಗಳೂರು: ಕಳೆದ 3 ದಿನಗಳಿಂದ ಅರಮನೆ ಮೈದಾನದಲ್ಲಿ ನಡೆದ ಅಂತರಾಷ್ಟ್ರೀಯ ವಾಣಿಜ್ಯ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಶನಿವಾರ ತೆರೆ ಬಿದ್ದಿದ್ದು, ಉತ್ಪಾದಕರು ಮತ್ತು ಮಾರಟಗಾರರ ನಡುವೆ ಒಟ್ಟಾರೆ 185 ಕೋಟಿ ರೂ. ಮೌಲ್ಯದ ಒಪ್ಪಂದಗಳು ಏರ್ಪಟ್ಟಿವೆ ಎಂದು ತಿಳಿದುಬಂದಿದೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿಯವರು, ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಾವಯವ, ಸಿರಿಧಾನ್ಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿದೆ. ಹಿಂದಿಗಿಂತಲೂ ಈ ಬಾರಿಯ ಮೇಳ ಅತ್ಯಂತ ವಿಶಿಷ್ಟ ಪೂರ್ಣವಾಗಿ ಆಯೋಜನೆಗೊಂಡಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿಯ ಮೇಳದಲ್ಲಿ ಒಟ್ಟಾರೆ 185 ಬಿ2ಬಿ ಸಭೆಗಳಲ್ಲಿ 194 ಉತ್ಪಾದಕರು, 105 ಮಾರಾಟ ಸಂಸ್ಥೆಗಳು ಪಾಲ್ಗೊಂಡಿದ್ದು, ಒಟ್ಟಾರೆ 185.41 ಕೋಟಿ ರೂ.ಗಳ ಒಪ್ಪಂದ ಏರ್ಪಟ್ಟಿದೆ. ಮೇಳದ ಸ್ಟಾಲ್ಗಳಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ವಹಿವಾಟು ನಡೆದಿದೆ. ಈ ವರ್ಷ ಅಂದಾಜು ಒಟ್ಟಾರೆ 3 ಲಕ್ಷ ಮಂದಿ ಮೇಳಕ್ಕೆ ಆಗಮಿಸಿ ವೀಕ್ಷಿಸಿ ಖರೀದಿಸಿದ್ದಾರೆಂದು ಹೇಳಿದರು.
ದೇಶದ 25 ರಾಜ್ಯಗಳು, 5 ರಾಜ್ಯಗಳ ಕೃಷಿ ಸಚಿವರು ಮೇಳದಲ್ಲಿ ಭಾಗವಹಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ಇತರ ರಾಜ್ಯಗಳು ಕರ್ನಾಟಕದ ಈ ಅಂತಾರಾಷ್ಟ್ರೀಯ ಮೇಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದು, ಇದೇ ಮಾದರಿ ಇರಿಸಿಕೊಂಡು ತಮ್ಮ ರಾಜ್ಯದಲ್ಲಿಯೂ ಸಿರಿಧಾನ್ಯ ಮೇಳ ಆಯೋಜಿಸುವುದಾಗಿ ಹೇಳಿದ್ದಾರೆ. ಇದು ನಮಗೆ ಹೆಮ್ಮೆ ತಂದಿದೆ. ದೇಸಿ ಪೆವಿಲಿಯನ್ ಕೂಡ ಎಲ್ಲರ ಆಕರ್ಷಣೆ ಪಡೆದಿದೆ ಎಂದು ತಿಳಿಸಿದರು.
ರೈತರು ಸಬಲರಾದಾಗ ದೇಶವು ಸುಭದ್ರವಾಗುತ್ತದೆ ಮತ್ತು ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ. ಕೃಷಿ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಶ್ರಮಿಸಲಿದೆ. ರೈತರ ಶ್ರಮವನ್ನು ಗೌರವಿಸಲು ಮತ್ತು ಪ್ರೋತ್ಸಾಹಿಸಲು ಈ ಮೇಳವು ವೇದಿಕೆಯನ್ನು ಒದಗಿಸಿತು. ಇದಲ್ಲದೆ, ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಿರಿಧಾನ್ಯಗಳನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಸಾವಯವ ಮತ್ತು ಸಿರಿಧಾನ್ಯಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ದೈನಂದಿನ ಆಹಾರದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
Advertisement