
ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಸಂಗಮ್ ಘಾಟ್‌ನಲ್ಲಿ ಆಯೋಜಿಸಲಾಗಿರುವ ಅತೀ ದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನ್ನಡಿಗರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ತಿಳಿದುಬಂದಿದೆ.
ಬೆಳಗಾವಿಯಿಂದ 60ಕ್ಕೂ ಹೆಚ್ಚು ಜನ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದು, ಕೆಲವರಿಗೆ ಗಾಯಗಳಾಗಿವೆ ಎಂಬ ವರದಿಗಳಿಂದ ತಿಳಿದುಬಂದಿದೆ. ಬೆಳಗಾವಿಯಿಂದ ಬಸ್ ನಲ್ಲಿ ತೆರಳಿದ್ದರು. ಈ ಪೈಕಿ ಕೆಲವರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.
ಸರೋಜಿನಿ ನಡುವಿನಹಳ್ಳಿ ಎಂಬುವವರುಮಾತನಾಡಿ, ಎರಡು ಬಸ್‌ಗಳಲ್ಲಿ 60 ಜನರು ಮಹಾಕುಂಭ ಮೇಳಕ್ಕೆ ಬಂದಿದ್ದೆವು. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದವರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು. ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ಬೆಳಗಾವಿ ನಗರದ ಶೆಟ್ಟಿಗಲ್ಲಿಯ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ: ಸಿಎಂ
ಕಾಲ್ತುಳಿತ ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ ಎಂದು ತಿಳಿಸಿದ್ದಾರೆ.
ಈ ನಡುವೆ ಮಹಾ ಕುಂಭಮೇಳ ಮುಗಿಸಿ ಕಾಶಿಯಾತ್ರೆಗೆ ತೆರಳುವಾಗ ಭೀಕರ ಅಪಘಾತ ಸಂಭವಿಸಿ ಮೈಸೂರು ಮೂಲದ ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಬಳಿನಡೆದಿದೆ.
ಮೃತರನ್ನು ಪುರೋಹಿತರಾದ ರಾಮಕೃಷ್ಣ ಶರ್ಮಾ (31), ಅರುಣ್ ಶಾಸ್ತ್ರಿ (38) ಎಂದು ಗುರ್ತಿಲಾಗಿದೆ. ಈ ಇಬ್ಬರು ತಮ್ಮ ಕಾರಿನಲ್ಲಿ ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದರು. ಕುಂಭಮೇಳದಲ್ಲಿ ಪವಿತ್ರಾ ಸ್ನಾನ ಮುಗಿಸಿದ ನಂತರ ಕಾಶಿಯಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಮಿರ್ಜಾಪುರದ ಬಳಿ ಕಾರು ಹಾಗೂ ಲಾರಿ ನಡುವೆ ಭಯಾನಕ ಡಿಕ್ಕಿ ಸಂಭವಿಸಿದೆ. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಇಬ್ಬರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರಾಮಕೃಷ್ಣ, ಕೆ.ಆರ್.ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಅರುಣ್ ಶಾಸ್ತ್ರಿ ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು ವರದಿಗಳಿಂದ ತಿಳಿದುಬಂದಿದೆ.
Advertisement