
ಬೆಂಗಳೂರು: ಚಲಿಸುತ್ತಿದ್ದ ಬಸ್ ಹತ್ತಲು ಹೋದ ಯುವತಿಯೊಬ್ಬರು ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಯುವತಿ ಮುಗ್ಗರಿಸಿ ಬಿದ್ದಿದ್ದು, ಪರಿಣಾಮ ಆಕೆಯ ಮೇಳೆ ಬಸ್ ನ ಹಿಂದಿನ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಮೃತ ಯುವತಿಯನ್ನು ಆಂಧ್ರಪ್ರದೇಶದ ಅನಂತಪುರದ ನಿವಾಸಿ ಮೋನಿಕಾ (20 ವರ್ಷ) ಎಂದು ಗುರುತಿಸಲಾಗಿದೆ. ಮೋನಿಕಾ ಪ್ರಸ್ತುತ ನಗರದ ಕತ್ರಿಗುಪ್ಪೆಯಲ್ಲಿ ವಾಸಿಸುತ್ತಿದ್ದರು. ಈಕೆ ಬೊಮ್ಮನಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ದೇವೇಗೌಡ ಪೆಟ್ರೋಲ್ ಬಂಕ್, ಚಿನ್ನಮ್ಮ ಜಂಕ್ಷನ್ ಸಮೀಪ ಮೋನಿಕಾ ಬಿಎಂಟಿಸಿ ಬಸ್ ಹತ್ತಲು ಹೋಗಿದ್ದಾರೆ. ಅಷ್ಟರಲ್ಲಾಗಲೇ ಸಿಗ್ನಲ್ ಬಿಟ್ಟು ಬಸ್ ಚಲಿಸುತ್ತಿತ್ತು. ಆದರೂ ಆಕೆ ಬಸ್ ಹತ್ತುವ ಪ್ರಯತ್ನವಾಗಿ ಓಡಿ ಬಸ್ ಹತ್ತಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮುಗ್ಗರಿಸಿ ಬಿದ್ದು ಬಸ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೋನಿಕಾ ಮೇಲೆ ಬಸ್‌ನ ಹಿಂದಿನ ಚಕ್ರ ಹರಿದಿದ್ದು, ಪರಿಣಾಮ ಸ್ಥಳದಲ್ಳೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
Advertisement