

ಮಂಗಳೂರು: ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಮಂಗಳೂರು ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿಯನ್ನು ಜೂನ್ 30 ರಂದು ಬಂಧಿಸಿ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತ, 2020 ರಲ್ಲಿ ಮುಲ್ಕಿ ವಿಜಯ ಸನ್ನಿಧಿ ಹೆದ್ದಾರಿಯ ಬಳಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು.
ಆದರೆ, ಏಪ್ರಿಲ್ 22, 2022 ರಂದು ಸುಪ್ರೀಂ ಕೋರ್ಟ್ ಆರೋಪಿಯ ಜಾಮೀನು ರದ್ದುಗೊಳಿಸಿತು. ನಂತರ ಮೊಹಮ್ಮದ್ ಮುಸ್ತಫಾ ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಜೂನ್ 5, 2020 ರಂದು ಹತ್ತು ಜನರ ಗುಂಪಿನಿಂದ ಹತ್ಯೆಗೀಡಾದ ಅಬ್ದುಲ್ ಲತೀಫ್ ಅವರ ಕೊಲೆಯಲ್ಲಿ ಮುಸ್ತಫಾ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಸ್ತುತ ವಿಚಾರಣೆಯಲ್ಲಿದೆ.
ಮುಸ್ತಫಾ ನಕಲಿ ದಾಖಲೆಗಳನ್ನು ಬಳಸಿ ಒಮಾನ್‌ಗೆ ಪರಾರಿಯಾಗಿ, ಏಪ್ರಿಲ್ 2024ರಲ್ಲಿ ನೇಪಾಳ ಮೂಲಕ ಅಕ್ರಮವಾಗಿ ಭಾರತಕ್ಕೆ ಮರಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಶೇಷ ತಂಡವು ಜೂನ್ 30 ರಂದು ಮೂಲ್ಕಿ ತಾಲ್ಲೂಕಿನ ಪಕ್ಷಿಕೆರೆ ಎಂಬ ಆತನ ಹುಟ್ಟೂರು ಬಳಿ ಪತ್ತೆಹಚ್ಚಿ ಬಂಧಿಸಲಾಗಿದೆ.
ಅಕ್ರಮ ವಲಸೆ, ನಕಲಿ ದಾಖಲೆಗಳ ಬಳಕೆ ಮತ್ತು ವಿಚಾರಣೆಯಿಂದ ತಪ್ಪಿಸಿಕೊಂಡಿದಕ್ಕಾಗಿ ವಿವಿಧ ಸೆಕ್ಷನ್ ಅಡಿಯಲ್ಲಿ ಆತನ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಂಗಳೂರು, ಚಿಕ್ಕಮಗಳೂರು ಮತ್ತು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆತನ ವಿರುದ್ಧ ಒಟ್ಟು ಒಂಬತ್ತು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.