
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸದೇ ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಟುಂಬದ ಸರ್ವೇ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಶೇ.91 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬೆಂಗಳೂರು ನಗರದಲ್ಲಿ ಶೇ.50 ರಷ್ಟು ಸಮೀಕ್ಷೆ ಪೂರ್ಣಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಮೀಕ್ಷೆ ಪೂರ್ಣಗೊಂಡ ಮನೆಗಳನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರು ಸ್ಟಿಕ್ಕರ್ ಅಂಟಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಕಳೆದ ಜೂ.23 ರಿಂದ ನಗರದಲ್ಲಿ ಸ್ಟಿಕ್ಕರ್ ಅಂಟಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ, ಇದೀಗ ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸುತ್ತಿರುವ ಕುರಿತು ವ್ಯಾಪಕ ದೂರು ಕೇಳಿ ಬರುತ್ತಿವೆ.
ಈ ಬೆಳವಣಿಗೆಗೆ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದು, ಯಾವ ಪುರುಷಾರ್ಥಕ್ಕಾಗಿ ಈ ಸಮೀಕ್ಷೆ? ಎಂದು ಪ್ರಶ್ನೆ ಮಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಸಂಪೂರ್ಣ ಬೋಗಸ್ ಎನ್ನುವುದಕ್ಕೆ ಮೇಲಿಂದ ಮೇಲೆ ಸಾಕ್ಷ್ಯ ಲಭಿಸುತ್ತಿದೆ. ಸರ್ಕಾರ ನಿಯೋಜಿಸಿದ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮನೆಗೆ ಭೇಟಿ ನೀಡದೆ, ಮನೆಯವರನ್ನು ವಿಚಾರಿಸದೆ ಹೊರಗಿನ ಗೋಡೆಗೆ ಸ್ಟಿಕ್ಕರ್ ಅಂಟಿಸಿ ಜಾತಿಗಣತಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಯಾವ ಪುರುಷಾರ್ಥಕ್ಕಾಗಿ ಈ ಸಮೀಕ್ಷೆ? ಎಂದು ಪ್ರಶ್ನಿಸಿದೆ.
ಜೆಡಿಎಸ್ ಪೋಸ್ಟ್ ಮಾಡಿ, ಇದು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ. ಪರಿಶಿಷ್ಟರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ್ ಅವರೇ, ಮನೆ ಮಾಲಿಕರ/ವಾಸವಿರುವವರ ಬಳಿ ಮಾಹಿತಿಯನ್ನು ಪಡೆಯದೇ ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ? ಎಂದು ಪ್ರಶ್ನಿಸಿದೆ.
ಲಂಚಗುಳಿತನ, ಭ್ರಷ್ಟಾಚಾರ, ಅಧಿಕಾರ ದಾಹ, ಕುರ್ಚಿ ಕಿತ್ತಾಟದಲ್ಲಿ ಮಗ್ನರಾಗಿರುವ ಸಿಎಂ, ಡಿಸಿಎಂ ನಿಮ್ಮ ರಾಜಕೀಯ ಮೇಲಾಟಗಳಿಗಾಗಿ ಕನ್ನಡಿಗರ ತರಿಗೆ ಹಣವನ್ನು ಪೋಲು ಮಾಡಬೇಡಿ ಎಂದು ಹೇಳಿದೆ.
Advertisement