

ಬೆಂಗಳೂರು: ಕೋಟಿ ಕೋಟಿ ತೆರಿಗೆ ವಂಚಿಸಿ ನಗರದಲ್ಲಿ ಓಡಾಡಿಕೊಂಡಿದ್ದ ಐಷಾರಾಮಿ ಕಾರು ಮಾಲೀಕನಿಗೆ ಆರ್‌ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. 1.4ಕೋಟಿ ರಸ್ತೆ ತೆರಿಗೆ ಬಾಕಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಅಧಿಕಾರಿಗಳು ಬುಧವಾರ ಮಹಾರಾಷ್ಟ್ರ ನೋಂದಣಿ ಸಂಖ್ಯೆಯನ್ನು ಹೊಂದಿರುವ ಫೆರಾರಿ ಕಾರನ್ನು ತಡೆದರು. ರಸ್ತೆ ತೆರಿಗೆ ಕಟ್ಟಲು ಅಥವಾ ಕ್ರಮ ಕೈಗೊಳ್ಳಲು ಮಾಲೀಕರಿಗೆ ಸಂಜೆಯವರೆಗೆ ಸಮಯ ನೀಡಲಾಯಿತು. ನಂತರ, ಮಾಲೀಕರು 1.4 ಕೋಟಿ ರೂ. ರಸ್ತೆ ತೆರಿಗೆಯನ್ನು ಪಾವತಿಸಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ ಕಾರು ಇದಾಗಿದೆ. ಮಹಾರಾಷ್ಟ್ರದಲ್ಲಿ 20 ಲಕ್ಷ ರೂ. ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್‌ನಿಂದಲೂ ಕರ್ನಾಟಕದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿದ್ದ. ಕಾರಿನ ಅನಧಿಕೃತ ಓಡಾಟದ ಬಗ್ಗೆ ಆರ್‌ಟಿಓಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದರು.
ಬುಧವಾರ (ಜು.2) ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರನ್ನು ತಡೆಹಿಡಿದ ಆರ್‌ಟಿಓ ಅಧಿಕಾರಿಗಳು ತಪಾಸಣೆ ನಡೆಸಿದಾಗ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದಿದೆ.
ರಸ್ತೆ ತೆರಿಗೆಯನ್ನು ತೆರವುಗೊಳಿಸದೆ ರಾಜ್ಯದಲ್ಲಿ ಸಂಚರಿಸುವ ಐಷಾರಾಮಿ ವಾಹನಗಳ ಮೇಲೆ ಸಾರಿಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಕರ್ನಾಟಕಕ್ಕಿಂತ ಬೇರೆ ರಾಜ್ಯಗಳಲ್ಲಿ ರಸ್ತೆ ತೆರಿಗೆಗಳು ತೀರಾ ಕಡಿಮೆ ಇರುವುದರಿಂದ ಐಷಾರಾಮಿ ಕಾರು ಮಾಲೀಕರು ತಮ್ಮ ವಾಹನಗಳನ್ನು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಾಯಿಸಿಕೊಳ್ಳುತ್ತಾರೆ.
ಈ ವರ್ಷದ ಆರಂಭದಲ್ಲಿ, ಸಾರಿಗೆ ಇಲಾಖೆಯು 30 ಉನ್ನತ ದರ್ಜೆಯ ಕಾರು ಮಾಲೀಕರಿಗೆ ತೆರಿಗೆ ಪಾವತಿಸಲು ನೋಟಿಸ್ ನೀಡಿತು ಮತ್ತು 3 ಕೋಟಿ ರೂ.ಗೂ ಹೆಚ್ಚು ಸಂಗ್ರಹಿಸುವ ನಿರೀಕ್ಷೆಯಿತ್ತು.
ಗ್ರಾಹಕರಿಂದ ಅಧಿಕ ಶುಲ್ಕ ವಿಧಿಸುವ ಆಟೋರಿಕ್ಷಾಗಳ ಮೇಲೆ ಸಾರಿಗೆ ಅಧಿಕಾರಿಗಳು ಬುಧವಾರವೂ ತಮ್ಮ ದಾಳಿಯನ್ನು ಮುಂದುವರೆಸಿದರು. ಸೂಕ್ತ ದಾಖಲೆಗಳಿಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ 125 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 22 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement