
ಬೆಂಗಳೂರು: ಪತಿಯ ಹತ್ಯೆ ಮಾಡಿ, ಹೃದಯಾಘಾತ ಎಂದು ಸುಳ್ಳಿನ ಕಥೆ ಕಟ್ಟಿದ್ದ ಮಹಿಳೆಯನ್ನು ಮರಣೋತ್ತರ ಪರೀಕ್ಷೆ ವರದಿಯ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಭವಾನಿ ನಗರದ ನಿವಾಸಿ ಭಾಸ್ಕರ್ (41) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ಶೃತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಭಾಸ್ಕರ್‌ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಯಲಾಗಿದೆ.
ಭಾಸ್ಕರ್ ಮೇಲೆ ಹಲ್ಲೆ ನಡೆದು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದರು. ಇದರ ಬೆನ್ನಲ್ಲೇ ಶಂಕೆ ಮೇರೆಗೆ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಹನ್ನೆರಡು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶೃತಿ ಜೊತೆ ಖಾಸಗಿ ಉದ್ಯೋಗಿ ಭಾಸ್ಕರ್ ಎರಡನೇ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮೃತ ಭಾಸ್ಕರ್ ಸ್ತ್ರೀಲೋಲನಾಗಿದ್ದು, ಮಹಿಳೆಯರ ಜತೆ ಸ್ನೇಹ ಮಾಡಿ ಮೋಜು ಮಸ್ತಿ ಮಾಡುವುದು ಆತನ ಖಯಾಲಿ ಆಗಿತ್ತು. ಇತ್ತ ಮನೆ ಕಡೆ ಆತ ಲಕ್ಷವಿರಲಿಲ್ಲ. ವಾರಕ್ಕೆರಡು ಮೂರು ದಿನಗಳು ಆತ ಮನೆ ಕಡೆ ಸುಳಿಯುತ್ತಿರಲಿಲ್ಲ. ತನ್ನ ಮಕ್ಕಳ ಬಗ್ಗೆ ಆತನಿಗೆ ಕಾಳಜಿ ಇರಲಿಲ್ಲ. ಹೀಗಾಗಿ ತನ್ನ ಪತಿಯ ಉಡಾಫೆ ವರ್ತನೆಗೆ ಶೃತಿ ಬೇಸರಗೊಂಡಿದ್ದಳು.
ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಮನೆ ಕೆಲಸದ ಮಹಿಳೆ ಜೊತೆಗೂ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆಕೆಗೆ ಅನುಮಾನವಿತ್ತು. ಭಾಸ್ಕರ್ ಆದಾಯ ಉತ್ತಮವಾಗಿತ್ತು. ವೇತನವಲ್ಲದೆ ಮನೆ ಬಾಡಿಗೆಗಳಿಂದಲೇ ತಿಂಗಳಿಗೆ 1.15 ಲಕ್ಷ ಗಳಿಸುತ್ತಿದ್ದ. ಅದರಲ್ಲಿ ಹೆಚ್ಚಿನ ಹಣವನ್ನು ಮನೆ ಕೆಲಸದಾಳಿಗೇ ಖರ್ಚು ಮಾಡಿದ್ದ ಎನ್ನಲಾಗಿದೆ.
ಇದಲ್ಲದೆ ಕಳೆದ ಒಂದು ತಿಂಗಳಿನಿಂದ ಮನೆಗೆ ಬರುವುದನ್ನು ನಿಲ್ಲಿಸಿ ತನ್ನ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ಎನ್ನಲಾಗಿದೆ.
ಜೂನ್ 27 ರಂದು, ಮದ್ಯದ ಅಮಲಿನಲ್ಲಿ ಮನೆಗೆ ಬಂದಾಗ, ಶ್ರುತಿ ಮತ್ತೆ ಅವನೊಂದಿಗೆ ಜಗಳವಾಡಿದ್ದಾಳೆ. ಈ ಹಂತದಲ್ಲಿ ಸತಿ-ಪತಿ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಹಂತದಲ್ಲಿ ಕೆರಳಿದ ಶೃತಿ, ಪತಿ ಮುಖಕ್ಕೆ ಬಲವಾಗಿ ಗುದ್ದಿದ್ದಾಳೆ. ಈ ಪೆಟ್ಟಿಗೆ ಮದ್ಯದ ಅಮಲಿನಲ್ಲಿದ್ದ ಆತ ಕುಸಿದು ಬಿದ್ದಿದ್ದಾನೆ. ಬಳಿಕ ಅಡುಗೆ ಮನೆಯಿಂದ ಇಟ್ಟಿನ ಕೋಲು ತಂದು ಗಂಡನಿಗೆ ಆಕೆ ಬಾರಿಸಿದ್ದಾಳೆ. ಈ ಹೊಡೆತದಿಂದ ಭಾಸ್ಕರ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.
ಆತನ ಸಾವನ್ನಪ್ಪಿದ್ದಾನೆಂಬುದು ತಿಳಿದ ಕೂಡಲೇ ಮೃತದೇಹಕ್ಕೆ ಸ್ನಾನ ಮಾಡಿಸಿ, ಹಾಸಿಗೆ ಮೇಲೆ ಮಲಗಿಸಿದ್ದಾಳೆ. ಮರು ದಿನ ಬೆಳಗ್ಗೆ ತಮ್ಮ ಸಂಬಂಧಿಕರಿಗೆ ಪತಿ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸುಳ್ಳಿನ ಕತೆ ಹೆಣೆದಿದ್ದಾಳೆ.
ಆದರೆ, ಸೊಸೆ ಮೇಲೆ ಭಾಸ್ಕರ್ ಪೋಷಕರು ಶಂಕೆ ವ್ಯಕ್ತಪಡಿಸಿದ್ದರು. ಅಂತೆಯೇ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ಶಂಕಾಸ್ಪದ ಸಾವು ಪ್ರಕರಣ ದಾಖಲಾಯಿತು.
ಈ ನಡುವೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೋಲಿನಿಂದ ನಡೆದ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆಂದು ವೈದ್ಯರು ಅಭಿಪ್ರಾಯ ತಿಳಿಸಿದ್ದರು. ಈ ವರದಿ ಆಧರಿಸಿ ಮಹಿಳೆಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Advertisement