News Headlines 05-07-25 | ಹಾಸನ ಹೃದಯಾಘಾತ ಸಾವುಗಳಿಗೂ Covid ಲಸಿಕೆಗೂ ಸಂಬಂಧವಿಲ್ಲ: ಸಮಿತಿ; ಗಾಳಿಯಲ್ಲಿ ಗುಂಡು: ಶಾಸಕ ರಮೇಶ್ ಪುತ್ರನ ವಿರುದ್ಧ FIR; ಹೆಲ್ಮೆಟ್ ಮಳಿಗೆಗಳ ಮೇಲೆ ದಾಳಿ ಪೊಲೀಸ್ ದಾಳಿ!

News Headlines 05-07-25 | ಹಾಸನ ಹೃದಯಾಘಾತ ಸಾವುಗಳಿಗೂ Covid ಲಸಿಕೆಗೂ ಸಂಬಂಧವಿಲ್ಲ: ಸಮಿತಿ; ಗಾಳಿಯಲ್ಲಿ ಗುಂಡು: ಶಾಸಕ ರಮೇಶ್ ಪುತ್ರನ ವಿರುದ್ಧ FIR; ಹೆಲ್ಮೆಟ್ ಮಳಿಗೆಗಳ ಮೇಲೆ ದಾಳಿ ಪೊಲೀಸ್ ದಾಳಿ!

1. ಹಾಸನ ಹೃದಯಾಘಾತ ಸಾವುಗಳಿಗೂ Covid ಲಸಿಕೆಗೂ ಸಂಬಂಧವಿಲ್ಲ

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸರಣಿ ಸಾವುಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಠಾತ್ ಹೃದಯಾಘಾತಕ್ಕೆ ಕೋವಿಡ್ -19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ. ಕೋವಿಡ್ ಲಸಿಕೆಗೂ ಈ ಹೃದಯಾಘಾತದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಧ್ಯಯನ ತಿಳಿಸಿದೆ. ಈ ವರ್ಷದ ಏಪ್ರಿಲ್ ಮತ್ತು ಮೇ ನಡುವೆ ಹೃದ್ರೋಗ ಸಮಸ್ಯೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ 45 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 251 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಎರಡು ತಿಂಗಳ ಪ್ರಾಯೋಗಿಕ ಅಧ್ಯಯನದ ನಂತರ ಈ ವರದಿ ಸಲ್ಲಿಸಲಾಗಿದೆ.

2. ಆ.15ರೊಳಗೆ Nammametro ಹಳದಿ ಮಾರ್ಗ ಕಾರ್ಯಾಚರಣೆ

ಆಗಸ್ಟ್ 15 ರೊಳಗೆ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾರ್ಯಾಚರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಫ್ರೀಕ್ವೆನ್ಸಿ, ಕಾರ್ಯನಿರ್ವಹಿಸುವ ನಿಲ್ದಾಣಗಳ ಸಂಖ್ಯೆ ಮತ್ತು ರೈಲುಗಳ ಲಭ್ಯತೆಯ ಆಧಾರದ ಮೇಲೆ ಸಮಯದ ಮಧ್ಯಂತರವನ್ನು ಅಂತಿಮಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಶನಿವಾರ ತಿಳಿಸಿದ್ದಾರೆ. ನಮ್ಮ ಮೆಟ್ರೋದ ಹಳದಿ ಮಾರ್ಗ ವಿಳಂಬವನ್ನು ಖಂಡಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು. ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಎಂಡಿ ಭೇಟಿ ನೀಡಿ ಲಿಖಿತ ಮನವಿಯನ್ನು ಸ್ವೀಕರಿಸಿದರು. ಆಗಸ್ಟ್ 15ರ ಒಳಗಾಗಿ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗುವುದು. ಹಳದಿ ಮಾರ್ಗ ಆರಂಭ ಮಾಡೋಕೆ ಈಗಾಗಲೇ ಮೂರು ಕೋಚ್ ಬಂದಿದೆ. ಎಲ್ಲಾ ರೆಗ್ಯುಲಾರಿಟೀಸ್ ಒಂದು ತಿಂಗಳ ಒಳಗೆ ಆಗಬಹುದು ಎಂದು ಹೇಳಿದರು.

3. Dharmasthala ಅತ್ಯಾಚಾರಕ್ಕೆ ಬಲಿಯಾದ ಶಾಲಾ ಬಾಲಕಿಯರು-ಮಹಿಳೆಯರನ್ನು ನಾನೇ ಮಣ್ಣು ಮಾಡಿದ್ದೇನೆ

ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ನೈರ್ಮಲ್ಯ ಉದ್ಯೋಗಿಯಾಗಿರುವ ದಲಿತ ವ್ಯಕ್ತಿಯೊಬ್ಬ ಅತ್ಯಂತ ಆಘಾತಕಾರಿ ಘಟನೆಗಳನ್ನು ಬಹಿರಂಗಪಡಿಸಿದ್ದು, 1998 ರಿಂದ 2014ರ ನಡುವೆ ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯಾದ ಶಾಲಾ ಬಾಲಕಿಯರು ಸೇರಿದಂತೆ ಹಲವು ಮಹಿಳೆಯರ ಶವಗಳನ್ನು ಬಲವಂತಕ್ಕೆ ಮಣಿದು ಸುಟ್ಟು ಮತ್ತು ಹೂತು ಹಾಕಿದ್ದೇನೆ ಎಂದು ದಕ್ಷಿಣ ಕನ್ನಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ದೂರಿನ ಆಧಾರದ ಮೇಲೆ ಜುಲೈ 3ರಂದು BNS ಸೆಕ್ಷನ್ 211(A) ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕೆ ತಿಳಿಸಿದ್ದಾರೆ. ತನ್ನ ಗುರುತನ್ನು ಬಹಿರಂಗಪಡಿಸದಂತೆ ಆತ ವಿನಂತಿಸಿದ್ದು ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದ ನಂತರ, ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಎಸ್‌ಪಿ ತಿಳಿಸಿದ್ದಾರೆ.

4. ಹೆಲ್ಮೆಟ್ ಮಳಿಗೆಗಳ ಮೇಲೆ ದಾಳಿ: 50 ಸಾವಿರ ದಂಡ

ಬೆಂಗಳೂರಿನಲ್ಲಿ RTO ಅಧಿಕಾರಿಗಳು ಮತ್ತು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ನಗರದಲ್ಲಿನ ಹೆಲ್ಮೆಟ್ ಅಂಗಡಿ ಮತ್ತು ಮಳಿಗೆಗಳ ಮೇಲೆ ದಾಳಿ ಮಾಡಿದರು. ನಿಷೇಧ ಇದ್ದರೂ ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ನಗರದ 19 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ಆರು ಅಂಗಡಿಗಳಿಗೆ 50,000 ರೂಪಾಯಿ ದಂಡ ವಿಧಿಸಿ ನೋಟೀಸ್ ಜಾರಿ ಮಾಡಲಾಗಿದೆ. ಕಳಪೆ ಹೆಲ್ಮೆಟ್ ಧರಿಸಿದ 38 ಬೈಕ್ ಸವಾರರಿಗೂ ದಂಡ ಹಾಕಲಾಗಿದೆ.

5. ಲಕ್ಷ್ಮೀದೇವಿ ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು; ಶಾಸಕ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ FIR

ಬೆಳಗಾವಿ ಜಿಲ್ಲೆಯ ಗೋಕಾಕ್ನ ಲಕ್ಷ್ಮೀದೇವಿ ಜಾತ್ರೆಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಪೊಲೀಸರ ಸಮ್ಮುಖದಲ್ಲೇ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬೆಂಬಲಿಗರೊಂದಿಗೆ ಜಾತ್ರೆಗೆ ಬಂದಿದ್ದ ಸಂತೋಷ್ ಜಾರಕಿಹೊಳಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಇದೇ ವೇಳೆ ಅವರ ಬೆಂಬಲಿಗರು ಘೋಷಣೆ ಕೂಗಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಈ ಘಟನೆಗೆ ಕುರಿತಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಸಂತೋಷ್ ಜಾರಕಿಹೊಳಿ ವಿರುದ್ಧ FIR ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com