
ಬೆಂಗಳೂರು: ಬೆಂಗಳೂರಿನಲ್ಲಿ RTO ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ಆಟೋಗಳ ಮೇಲೆ ಮುಗಿಬಿದ್ದಿದ್ದ ಅಧಿಕಾರಿಗಳು ಇದೀಗ ಹೆಲ್ಮೆಟ್ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು (Bengaluru Traffic Police), ಆರ್‌ಟಿಓ (RTO) ಮತ್ತು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ನಗರದಲ್ಲಿನ ಹೆಲ್ಮೆಟ್ (Helmet) ಅಂಗಡಿ ಮತ್ತು ಮಳಿಗೆಗಳ ಮೇಲೆ ದಾಳಿ ಮಾಡಿದರು. ನಿಷೇಧ ಇದ್ದರೂ ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅಧಿಕಾರಿಗಳು ಹೆಲ್ಮೆಟ್ ಅಂಗಡಿಗಳ ಮೇಲೆ ದಾಳಿ ಮಾಡಿ ಕಳಪೆ ಗುಣಮಟ್ಟದ ಹೆಲ್ಮೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
ಮೂಲಗಳ ಪ್ರಕಾರ ನಗರದ 19 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ಆರು ಅಂಗಡಿಗಳಿಗೆ 50,000 ರೂ. ದಂಡ ವಿಧಿಸಲಾಗಿದೆ ಮತ್ತು ನೋಟೀಸ್ ಜಾರಿ ಮಾಡಲಾಗಿದೆ. ಕಳಪೆ ಹೆಲ್ಮೆಟ್ ಧರಿಸಿದ 38 ಬೈಕ್ ಸವಾರರಿಗೂ ದಂಡ ವಿಧಿಸಲಾಗಿದೆ. ISI ಮಾರ್ಕ್ ಇಲ್ಲದ ಅಥವಾ ಅರ್ಧ ಹೆಲ್ಮೆಟ್ ಧರಿಸುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎಂದು ಎಚ್ಚರಿಸಲಾಗಿದೆ.
ನಗರದ ಸಿದ್ಧಯ್ಯ ರಸ್ತೆ, ಕಲಾಸಿಪಾಳ್ಯ ರಸ್ತೆ, ಲಾಲ್ ಬಾಗ್ ರಸ್ತೆ, ಮಾಗಡಿ ರಸ್ತೆ, ಸುಮನಹಳ್ಳಿ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ನಾಗರಭಾವಿ, ಔಟರ್ ರಿಂಗ್ ರಸ್ತೆ ಸೇರಿದಂತೆ ಒಟ್ಟು 19 ಸ್ಥಳಗಳಲ್ಲಿ ಬೆಂಗಳೂರು ಸಂಚಾರ ಪೊಲೀಸರು, ಆರ್‌ಟಿಓ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್‌ಗಳ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.
50 ಸಾವಿರ ರೂ. ದಂಡ
ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್ ಮಾಡುತ್ತಿದ್ದ ಆರು ಅಂಗಡಿಗಳಿಗೆ ಮಾಪನ ಇಲಾಖೆ 50 ಸಾವಿರ ರೂ. ದಂಡ ವಿಧಿಸಿದೆ. ಜೊತೆಗೆ, ದಿ ಲೀಗಲ್ ಮೆಟ್ರಾಲಜಿ ಕಾಯ್ದೆ (ಮಾಪನಶಾಸ್ತ್ರ ಕಾಯ್ದೆ) ಅಡಿ ನೋಟಿಸ್ ನೀಡಿದೆ. 13 ಅಂಗಡಿ ಮಾಲೀಕರಿಗೆ ಕೋರ್ಟ್ನಲ್ಲಿ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಅಧಿಕಾರಿಗಳು ಕಳಪೆ ಹಾಗೂ ಅರ್ಧ ಹೆಲ್ಮೆಟ್ಗಳನ್ನು ಜಪ್ತಿ ಮಾಡಿದರು.
Advertisement