
ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗಳಿಗೆ ರಾಜ್ಯ ಸರ್ಕಾರ ನಿಷೇಧ ಹೇರಿರುವ ನಡುವಲ್ಲೇ, ಹಲವಾರು ಪ್ರಯಾಣಿಕರು ವಾಟ್ಸಾಪ್ ಮೂಲಕ ಸವಾರರ ಸಂಪರ್ಕಿಸಿ, ಸೇವೆ ಪಡೆಯುತ್ತಿದ್ದಾರೆ.
ಟೆಕ್ ಪಾರ್ಕ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಕಚೇರಿ ಕೇಂದ್ರಗಳಿಂದ ನಿಯಮಿತವಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬಳಕೆ ಮಾಡುತ್ತಿದ್ದ ಜನರು, ಇದೀಗ ಸವಾರರಿಗೆ ವೈಯಕ್ತಿ ಸಂದೇಶಗಳನ್ನು ರವಾನಿಸಿ, ಸೇವೆ ಪಡೆಯುತ್ತಿದ್ದಾರೆ.
ಚಾಲಕರು ತಮ್ಮ ಲೈವ್ ಲೋಕೇಶನ್ ಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದು, ಬಳಿಕ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಹಿಂದಿನ ದರದಲ್ಲೇ ಸೇವೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪಾರ್ಸೆಲ್ ಗಳನ್ನು ಬುಕ್ ಮಾಡುವ ಕೆಲವರಿಗೆ ಸವಾರರು ಕರೆ ಮಾಡುತ್ತಿದ್ದು, ಪ್ರಯಾಣದ ಸೇವೆ ಬೇಕೆಂದರೆ ಸಂಪರ್ಕಿಸುವಂತೆ ತಿಳಿಸುತ್ತಿದ್ದಾರೆಂದು ಪ್ರಯಾಣಿಕರು ಹೇಳಿದ್ದಾರೆ.
ಈ ಹಿಂದೆ ಪ್ರಯಾಣಿಸಿದ್ದ ಸವಾರರ ಫೋನ್ ಸಂಖ್ಯೆಗಳನ್ನು ಸೇವ್ ಮಾಡಿಟ್ಟುಕೊಂಡು, ಸೌಲಭ್ಯಗಳನ್ನು ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣದಿಂದ ಕಚೇರಿಕೆ ತೆರಳಲು ಬೈಕ್ ಟ್ಯಾಕ್ಸಿಯನ್ನು ನಿಯಮಿತವಾಗಿ ಬುಕ್ ಮಾಡುತ್ತಿದ್ದೆ. ಅದೇ ಸವಾರ ನನಗೆ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ, ಡ್ರಾಪ್ ಬೇಕಾ ಎಂದು ಕೇಳುತ್ತಿದ್ದಾನೆ. ನಂತರ ಆತನ ಲೈವ್ ಲೊಕೇಶನ್'ನ್ನು ರವಾನಿಸುತ್ತಾನೆಂದು ವೈಟ್‌ಫೀಲ್ಡ್‌ನಲ್ಲಿ ಕೆಲಸ ಮಾಡುವ ಅನನ್ಯ ಎಂಬುವವರು ಹೇಳಿದ್ದಾರೆ.
ಪಾರ್ಸೆಲ್ ಬುಕ್ ಮಾಡುವ ವ್ಯಕ್ತಿ, ನಂತರ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ, ಅನೌಪಚಾರಿಕವಾಗಿ ನೇರ ಪಿಕಪ್ ಅನ್ನು ಪಡೆಯುತ್ತಿದ್ದಾನೆ. ಕೆಲ ಸವಾರರು ಪ್ರಯಾಣಿಕರಿಗೆ ತಮ್ಮ ದೂರವಾಣಿ ಸಂಖ್ಯೆಗಳನ್ನು ನೀಡುತ್ತಿದ್ದು, ಅಗತ್ಯವಾದರೆ, ಸಂಪರ್ಕಿಸುವಂತೆ ತಿಳಿಸುತ್ತಿದ್ದಾರೆ. ವಿಶೇಷವಾಗಿ ಮೆಟ್ರೋ ನಿಲ್ದಾಣಗಳು, ಕಚೇರಿ, ಪಿಡಿಗಳಿಗೆ ಪ್ರಯಾಣಿಸುವ ಮಾರ್ಗಗಳು, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಬೆಳ್ಳಂದೂರು ಮತ್ತು ಹೊರ ವರ್ತುಲ ರಸ್ತೆಯಂತಹ ಪ್ರದೇಶಗಳಲ್ಲಿ ಈ ಬೆಳವಣಿಗೆ ಹೆಚ್ಚು ಕಂಡು ಬರುತ್ತಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಇಂದಿರಾನಗರದಲ್ಲಿರುವ ನನ್ನ ಮನೆಯಿಂದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ನನ್ನ ಕೆಲಸದ ಸ್ಥಳಕ್ಕೆ ಪಾರ್ಸೆಲ್ ಬುಕ್ ಮಾಡಲು ಪ್ರಯತ್ನಿಸಿದೆ. ಸವಾರ ಕರೆ ಮಾಡಿ, ಪ್ರಯಾಣದ ಸೇವೆಯ ಅಗತ್ಯವಿದೆಯೇ ಎಂದು ಕೇಳಿದ. ನಾನು ಪಾರ್ಸೆಲ್ ಎಂದು ಹೇಳಿದಾಗ, ತನ್ನ ನಂಬರ್ ಸೇವ್ ಮಾಡಿಕೊಳ್ಳಿ. ಇಂದಿರಾನಗರ ಮತ್ತು ಸುತ್ತಮುತ್ತ ಪ್ರಯಾಣಿಸಲು ಸೇವೆ ಅಗತ್ಯವಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿದ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಶಿವಕುಮಾರ್ ಅವರು ಹೇಳಿದ್ದಾರೆ.
ಆಟೋ ದರಗಳು ಹೆಚ್ಚಾಗಿದ್ದು, ನಮಗೆ ಬೇಕೆ ಆಯ್ಕೆಯಿಲ್ಲ. ಆಟೋಗಳಲ್ಲಿ 2 ಕಿ.ಮೀ.ಗಿಂತ ಕಡಿಮೆ ದೂರಕ್ಕೂ 120-150 ರೂ.ಗಳವರೆಗೆ ಶುಲ್ಕ ವಿಧಿಸುತ್ತಾರೆ. ಕಡಿಮೆ ದೂರದ ಪ್ರಯಾಣ ಬೇಡಿಕೆಯನ್ನು ನಿರಾಕರಿಸುತ್ತಾರೆ. ಹೆಚ್ಚಿನ ದರ ಬರುವ ಪ್ರಯಾಣಕ್ಕಷ್ಟೇ ಸೇವೆ ನೀಡುತ್ತಾರೆ. ಹೀಗಾಗಿ ಬೈಕ್ ಟ್ಯಾಕ್ಸಿ ಸೇವೆ ನಮಗೆ ಅಗತ್ಯವಿದೆ ಎಂದು ವಸಂತ ನಗರದ ಕಲ್ಪನಾ ಎಂಬುವವರು ಹೇಳಿದ್ದಾರೆ.
ನಿಯಮಿತವಾಗಿ ಬಳಕೆ ಮಾಡುತ್ತಿದ್ದ ಸವಾರರಿಂದ ಸೇವೆ ಪಡೆಯಲು ಕೆಲ ಪ್ರಯಾಣಿಕರು ಬಯಸುತ್ತಿದ್ದರೆ, ಇನ್ನೂ ಕೆಲವರು ತಮ್ಮ ಸಂಖ್ಯೆಗಳನ್ನು ಸಂಪರ್ಕಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬೈಕ್ ಟ್ಯಾಕ್ಸಿ ನಿಷೇಧಿಸಿರುವ ಸರ್ಕಾರ ನಮಗೆ ಪರ್ಯಾಯ ಮಾರ್ಗವ್ನು ನೀಡುವ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.
Advertisement