
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಟ ದರ್ಶನ್ ಭಾಗಿಯಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಿಯತಮೆಗೆ ಅಶ್ಲೀಲ ಸಂದೇಶ ರವನಾಸಿದ ಎಂಬ ಕಾರಣಕ್ಕೇ ವ್ಯಕ್ತಿಯೊಬ್ಬನ ಅಪಹರಣ ಮಾಡಿ ಭೀಕರವಾಗಿ ಹಲ್ಲೆ ಮಾಡಲಾಗಿದೆ.
ಹೌದು.. ನಟಿ ಪವಿತ್ರಾ ಗೌಡ ಮತ್ತು ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆಯೇ ಇಲ್ಲೊಂದು 8 ರಿಂದ 10 ಜನರ ಪುಂಡರ ಗ್ಯಾಂಗ್ ವೊಂದು ವ್ಯಕ್ತಿಯೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ.
ಅಲ್ಲದೆ ಆರೋಪಿಗಳಲ್ಲಿ ಒಬ್ಬರು ಈ ಘಟನೆಯ ವಿಡಿಯೋ ಮಾಡಿದ್ದು, ಈ ದೃಶ್ಯದಲ್ಲಿ ದಾಳಿಕೋರರು ಕುಶಾಲ್ ಅವರನ್ನು ಥಳಿಸಿ, ವಿವಸ್ತ್ರಗೊಳಿಸಿ, ಅವರ ಖಾಸಗಿ ಭಾಗಗಳಿಗೆ ಹೊಡೆಯುವುದನ್ನು ತೋರಿಸಲಾಗಿದೆ. ಹೆಸರುಘಟ್ಟದಲ್ಲಿ ಈ ಘಟನೆ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಹಲ್ಲೆ ವೇಳೆ ರೇಣುಕಾಸ್ವಾಮಿ ಹೆಸರು ಉಲ್ಲೇಖ
ಇನ್ನು ಹಲ್ಲೆಯ ಸಮಯದಲ್ಲಿ, ದಾಳಿಕೋರರಲ್ಲಿ ಒಬ್ಬರು ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿ, ಇದೇ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅಲ್ಲದೆ ರೇಣುಕಾಸ್ವಾಮಿಯನ್ನು ಮುಗಿಸಿದಂತೆ ನಿನ್ನನ್ನೂ ಮುಗಿಸಿಬಿಡುತ್ತೇವೆ ಎಂದು ನಗುತ್ತಿದ್ದರು ಎನ್ನಲಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಕುಶಾಲ್ ಎರಡು ವರ್ಷಗಳ ಕಾಲ ಕಾಲೇಜು ವಿದ್ಯಾರ್ಥಿನಿಯೊಬ್ಬಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದರು, ಆದರೆ ಕೆಲವು ತಿಂಗಳ ಹಿಂದೆ ಈ ಜೋಡಿ ಕಾರಣಾಂತರಗಳಿಂದ ಬೇರ್ಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಹುಡುಗಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಂಡಳು. ಇದರಿಂದ ಕೋಪಗೊಂಡ ಕುಶಾಲ್ ಹುಡುಗಿಗೆ ಕೆಲವು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಈ ವೇಳೆ ಯುವತಿ ತನ್ನ ಗೆಳೆಯನಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಕುಶಾಲ್ ಬಗ್ಗೆ ಆಕ್ರೋಶಗೊಂಡ ಆಕೆಯ ಗೆಳೆಯ ತನ್ನ ಸ್ನೇಹಿತರೊಂದಿಗೆ ಸೇರಿ ದಾಳಿಗೆ ಯೋಜನೆ ರೂಪಿಸಿದ್ದ. ಅದರಂತೆ ಇವರು ಸಮಸ್ಯೆ ಪರಿಹರಿಸುವ ನೆಪದಲ್ಲಿ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋದರು.
ನಿರ್ಜನ ಪ್ರದೇಶದಲ್ಲಿ ಹಲ್ಲೆ
ಆರೋಪಿಗಳು ಅವನನ್ನು ಕಾರಿನಲ್ಲಿ ಅಪಹರಿಸಿ, ಕೆರೆಯ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಆತನ ಮೇಲೆ ಹಲ್ಲೆ ಮಾಡಿ ರೇಣುಕಾಸ್ವಾಮಿಯಂತೆಯೇ ನಿನಗೂ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಇದೀಗ ಸಂತ್ರಸ್ಥ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ
ಬೆಂಗಳೂರಿನ ಸುಮನಹಳ್ಳಿಯ ಚರಂಡಿ ಬಳಿ ರೇಣುಕಸ್ವಾಮಿಯ ಶವವು ಬಹು ಗಾಯಗಳೊಂದಿಗೆ ಪತ್ತೆಯಾಗಿತ್ತು. ಚಿತ್ರದುರ್ಗದ ನಿವಾಸಿ ರೇಣುಕಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆತನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಕೊಲ್ಲಲಾಗಿತ್ತು ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ, ಹಣಕಾಸಿನ ವಿವಾದವನ್ನು ಉಲ್ಲೇಖಿಸಿ ನಾಲ್ವರು ವ್ಯಕ್ತಿಗಳು ಜವಾಬ್ದಾರಿಯನ್ನು ಹೊತ್ತುಕೊಂಡು ಪೊಲೀಸರಿಗೆ ಶರಣಾಗಿದ್ದರು. ಆದಾಗ್ಯೂ, ಅವರ ಹೇಳಿಕೆಗಳಲ್ಲಿನ ಗೊಂದಲಗಳು ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ 15 ಜನರನ್ನು ಒಳಗೊಂಡ ಪಿತೂರಿಯನ್ನು ಬಹಿರಂಗಪಡಿಸಿತು. ಜೂನ್ 8 ರಂದು 33 ವರ್ಷದ ರೇಣುಕಸ್ವಾಮಿಯ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನಟ ದರ್ಶನ್ ಅವರನ್ನು ಜೂನ್ 11 ರಂದು ಬಂಧಿಸಲಾಗಿತ್ತು. ಇದೀಗ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ.
Advertisement