
ಬೆಂಗಳೂರು: ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಆದೇಶದ ವಿರುದ್ಧ ಆರ್‌ಸಿಬಿ ತಂಡದ ಮಾಲೀಕತ್ವ ಹೊಂದಿರುವ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್‌ಸಿಎಸ್‌ಪಿಎಲ್) ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಕುರಿತು ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣ ಸಂಬಂಧ ವಿಕಾಸ್ ಕುಮಾರ್ ವಿಕಾಸ್ ಅಮಾನತು ಆದೇಶ ವಜಾಗೊಳಿಸಿದ್ದ ಸಿಎಟಿ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿ ಹೆಚ್ಚು ಜನ ಆಗಮಿಸುವುದಕ್ಕೂ, ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಕಾಲ್ತುಳಿತ ನಡೆದಿರುವುದಕ್ಕೆ ಮೇಲ್ನೋಟಕ್ಕೆ ಆರ್‌ಸಿಬಿಯೇ ಕಾರಣ ಎಂಬುದಾಗಿ ಅಭಿಪ್ರಾಯಪಟ್ಟಿತ್ತು. ಸರಕಾರದಿಂದ ಸೂಕ್ತ ರೀತಿಯ ಅನುಮತಿ ಪಡೆಯದೆ ಅತಿ ಹೆಚ್ಚು ಜನ ಆಗಮಿಸುವುದಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದ ಪೊಲೀಸರು ಸೂಕ್ತ ಭದ್ರತೆ ಒದಗಿಸಿ ಜನ ದಟ್ಟಣೆಯನ್ನು ನಿಯಂತ್ರಣ ಮಾಡುವುದಕ್ಕೆ ಕಷ್ಟ ಸಾಧ್ಯವಾಗಿತ್ತು. ಇದೇ ಕಾರಣದಿಂದ ಕಾಲ್ತುಳಿತ ನಡೆದಿದೆ.
ಪೊಲೀಸರ ಅನುಮತಿಯಿಲ್ಲದೆ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆಗೆ ಆಹ್ವಾನಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು. ಇದರಿಂದ ಭಾರಿ ಜನ ಸಮೂಹ ಸೇರಲು ಕಾರಣವಾಯಿತು ಮತ್ತು ಪೊಲೀಸರಿಗೆ ಎಲ್ಲ ತಯಾರಿ ಮಾಡಿಕೊಳ್ಳಲು ಸಾಕಷ್ಟು ಸಮಯವಿರಲಿಲ್ಲ. ಕೇವಲ 12 ಗಂಟೆಗಳಲ್ಲಿ ಪೊಲೀಸರು ಸಂಪೂರ್ಣ ವ್ಯವಸ್ಥೆ ಮಾಡುತ್ತಾರೆಂದು ನಿರೀಕ್ಷಿಸಲಾಗುವುದಿಲ್ಲ. ಇದರ ಪರಿಣಾಮವಾಗಿ 11 ಜನರು ಸಾವನ್ನಪ್ಪಿದರು ಎಂದು ತಿಳಿಸಿದ್ದರು.
ಇದನ್ನು ಪ್ರಶ್ನಿಸಿ ಆರ್'ಸಿಬಿ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿಎಟಿ ತನ್ನ ವಾದ ಆಲಿಸದೆ ಏಕಪಕ್ಷೀಯವಾಗಿ ಈ ಆದೇಶ ಮಾಡಿದೆ. ಸಿಎಟಿ ನಡೆ ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಆದ್ದರಿಂದ ಐಪಿಎಸ್ ಅಧಿಕಾರಿ ಅಮಾನತು ಆದೇಶ ವಜಾಗೊಳಿಸಿ ಜುಲೈ 1ರಂದು ಹೊರಡಿಸಿದ ಆದೇಶದಲ್ಲಿ ಆರ್‌ಸಿಬಿ ಕುರಿತು ವ್ಯಕ್ತಪಡಿಸಲಾಗಿರುವ ಅಭಿಪ್ರಾಯ, ಆರೋಪಗಳನ್ನು ಆದೇಶದಿಂದ ತೆಗೆದು ಹಾಕುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿತ್ತು.
ಈ ನಡುವೆ ವಿಕಾಸ್ ಕುಮಾರ್ ವಿಕಾಸ್ ಅಮಾನತು ಆದೇಶ ವಜಾಗೊಳಿಸಿ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿರುವ ಮೇಲ್ಮನವಿಯು ನ್ಯಾ| ಎಸ್.ಜಿ. ಪಂಡಿತ್ ಹಾಗೂ ನ್ಯಾ| ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಇದೇ ವೇಳೆ ಆರ್‌ಸಿಬಿ ಸಲ್ಲಿಸಿರುವ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸಲಾಯಿತು.
ಕೆಲ ವಾದ ಆಲಿಸಿದ ನ್ಯಾಯಪೀಠ, ಆರ್‌ಸಿಬಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹಾಗೂ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ಗೆ ನೋಟಿಸ್ ಜಾರಿಗೊಳಿಸಿತು.
ಅದೇ ರೀತಿ ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿರುವ ಮೇಲ್ಮನವಿಯಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ಗೆ ಮಾತ್ರ ನೋಟಿಸ್ ಜಾರಿಗೊಳಿಸಿ ಎರಡೂ ಅರ್ಜಿಗಳ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿತು.
Advertisement