
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಟೋ ಚಾಲಕರಿಗೆ ಆರ್ ಟಿಒ ಅಧಿಕಾರಿಗಳು ಶಾಕ್ ನೀಡಿದ್ದು, ಮತ್ತೆ ಕಾರ್ಯಾಚರಣೆ ಮೂಲಕ ನಿಯಮ ತಪ್ಪಿದ ಚಾಲಕರಿಗೆ ದುಬಾರಿ ದಂಡ ವಿಧಿಸುತ್ತಿದ್ದಾರೆ.
ಹೌದು.. ಸಿಲಿಕಾನ್ ಸಿಟಿ ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ನಿಯಮ ಬಾಹಿರವಾಗಿ ಆಟೋ ಚಾಲನೆ ಮಾಡುತ್ತಿದ್ದ ಆಟೋ ಚಾಲಕರ ವಿರುದ್ಧ ಆರ್ ಟಿ ಒ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ನಿಯಮ ಮೀರಿದ ಚಾಲಕರಿಗೆ ದುಬಾರಿ ದಂಡ ಹೇರುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಆಟೋಗಳ ಹಿಂದೆ ನಿಯಮ ಬಾಹಿರವಾಗಿ ಭಿತ್ತಿ ಪತ್ರಗಳು ಮತ್ತು ವಿವಿಧ ಪೋಸ್ಟರ್ ಗಳು ಅಂಟಿಸಿಕೊಂಡು ತಿರುಗಾಡುತ್ತಿದ್ದ ಆಟೋ ಚಾಲಕರನ್ನು ತಡೆದು ಅಧಿಕಾರಿಗಳು ಸ್ಥಳದಲ್ಲೇ ಭಾರಿ ದಂಡ ಹೇರುತ್ತಿದ್ದಾರೆ.
ಮೂಲಗಳ ಪ್ರಕಾರ ಈ ರೀತಿ ನಿಯಮ ಬಾಹಿರವಾಗಿ ಪೋಸ್ಟರ್ ಗಳನ್ನು ಅಂಟಿಸಿಕೊಂಡು ತಿರುಗಾುತ್ತಿರುವ ಆಟೋಗಳಿಗೆ ಅಧಿಕಾರಿಗಳು ಬರೊಬ್ಬರಿ 5 ಸಾವಿರ ರೂವರೆಗೂ ದಂಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಚ್ಚರ ವಹಿಸಿ, ಪೋಸ್ಟರ್ ಅಂಟಿಸದಿರಿ
ಆಟೋ ಹಿಂದೆ ಯಾವುದೇ ಜಾಹೀರಾತು ಅಳವಡಿಕೆ ಮುನ್ನ ಎಚ್ಚರ ವಹಿಸಿ. ನೂರು-ಐನೂರರ ಆಸೆಗೆ ಆಟೋ ಹಿಂದೆ ಫಿಲ್ಮ್ ಪೋಸ್ಟರ್ ಅಥವಾ ಇನ್ನಾವುದೇ ಭಿತ್ತಿಪತ್ರಗಳನ್ನು ಅಂಟಿಸಿಕೊಂಡು ತಿರುಗಾಡುತ್ತಿದ್ದರೆ ಅಧಿಕಾರಿಗಳು ಖಂಡಿತಾ ದಂಡ ಹೇರುತ್ತಾರೆ. ಫಿಲ್ಮ್/ ಇನ್ಸೂರೆನ್ಸ್/ ಮತ್ತಿತರ ಪೋಸ್ಟರ್ ಹಾಕಿಸಿಕೊಂಡ ಸಾವಿರಾರು ಆಟೋ ಚಾಲಕರಿಗೆ ಇಂದು RTO ಬಿಸಿ ಮುಟ್ಟಿಸಿದೆ.
ನಗರದ ಸಾವಿರಾರು ಆಟೋಗಳಿಗೆ ದಂಡ ಹಾಕಲಾಗಿದ್ದು, ಈ ಬಗ್ಗೆ ನಮಗೆ ಅರಿವಿರಲಿಲ್ಲ ಅಂತ ಚಾಲಕರು ಅಳಲು ತೊಡಿಕೊಂಡಿದ್ದಾರೆ. ಫಿಲ್ಮ್ ಪೋಸ್ಟರ್ ಮಾತ್ರವಲ್ಲ, ಬೇರೆ ಯಾವುದೇ ಜಾಹೀರಾತು ಅಳವಡಿಕೆ ಕಾನೂನು ಬಾಹಿರವಾಗಿದೆ. ಈ ಸಲುವಾಗಿ ಸಾರಿಗೆ ಇಲಾಖೆ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಅನಿವಾರ್ಯತೆಯಾಗಿದೆ ಎಂದು ಹೇಳಲಾಗಿದೆ.
Advertisement