
ಬೆಂಗಳೂರು: ಮುಂದಿನ 3 ವರ್ಷದಲ್ಲಿ ಬೆಂಗಳೂರು ಹಾಗೂ ಸುತ್ತಲಿನ 100 ಕಿ.ಮೀ. ವ್ಯಾಪ್ತಿಯ ಎಲ್ಲಾ ರೈಲ್ವೆ ಲೆವೆಲ್ ಕ್ರಾಸ್‌ಗಳನ್ನು ತೆಗೆದು ರಸ್ತೆ ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣ ಮಾಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರು ಭಾನುವಾರ ಹೇಳಿದರು.
ಕೆಂಗೇರಿ- ಹೆಜ್ಜಾಲ ಮಧ್ಯೆ ರೂ.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಗೇಟ್ ನಂ.15 ಉದ್ಘಾಟನೆ ಮತ್ತು ಗೇಟ್ ನಂ.16 ರಲ್ಲಿ 17.74ಕೋಟಿ ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ (ಆರ್‌ಯುಬಿ) ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರು ಸುತ್ತಮುತ್ತಲಿನ ಲೆವೆಲ್ ಕ್ರಾಸ್ ನಿಂದ ನಗರ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಲಯದಿಂದ ಸುತ್ತಲ 100 ಕಿಮೀ ವ್ಯಾಪ್ತಿಯಲ್ಲಿ ಎಷ್ಟು ಲೆವೆಲ್ ಕ್ರಾಸ್‌ಗಳಿವೆ ಎಂಬುದನ್ನು ಮುಂದಿನ 3 ತಿಂಗಳಲ್ಲಿ ಸರ್ವೆ ಮಾಡಬೇಕು. ಎಲ್ಲಿ ಆರ್‌ಒಬಿ ನಿರ್ಮಿಸಬೇಕು, ಎಲ್ಲಿ ಆರ್‌ಯುಬಿ ನಿರ್ಮಿಸಬೇಕು ಎಂಬುದನ್ನು ಯೋಜಿಸಿ ಅದಕ್ಕೆ ತಗಲುವ ವೆಚ್ಚ ಸೇರಿ ಇತರೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಮುಂದಿನ ಮೂರು ವರ್ಷದಲ್ಲಿ ಎಲ್ಲ ಲೆವೆಲ್ ಕ್ರಾಸ್ ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದೇವೆಂದು ಭರವಸೆ ನೀಡಿದರು.
ಇದೇ ವೇಳೆ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಮೆಗಾ ಕೋಚಿಂಗ್ ಟರ್ಮಿನಲ್ ಯೋಜನೆಗಳನ್ನೂ ಕೂಡ ಸಚಿವರು ಘೋಷಣೆ ಮಾಡಿದರು.
ರೈಲ್ವೆ ಮಂಡಳಿಯು ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದು, ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲಾಗುತ್ತಿದೆ. ಪ್ರಸ್ತುತ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸ್ಥಳಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಮೂರರಿಂದ ನಾಲ್ಕು ತಿಂಗಳೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಲೆವೆಲ್ ಕ್ರಾಸ್‌ನಿಂದ ಸಂಚಾರ ದಟ್ಟಣೆ ಮಾತ್ರವಲ್ಲದೆ ಅಪಘಾತಗಳು ಆಗುತ್ತಿವೆ. ಹೀಗಾಗಿ ಇವನ್ನು ತೆರವು ಮಾಡಲು ಕೇಂದ್ರ ಸರ್ಕಾರ ವಿಶೇಷ ಕ್ರಮ ವಹಿಸಿದೆ. ರಸ್ತೆ ಕೆಳಸೇತುವೆ ಆದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದನ್ನು ತೆಗೆದುಹಾಕಲು ಅಗತ್ಯ ಕ್ರಮವಹಿಸಲಾಗುತ್ತದೆ. ರಾಮೋಹಳ್ಳಿಯಲ್ಲಿ ನೀರು ನಿಲ್ಲುವ ಸಮಸ್ಯೆ ಇಲ್ಲ. ದಾಬಸ್ ಪಾಳ್ಯ ಸೇರಿ ಇತರೆಡೆ ರೈಲ್ವೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
Advertisement