
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬ್ಯಾಟರಾಯನಪುರ ಜಕ್ಕೂರು ಕೆರೆ ಬಳಿ 10 ಎಕರೆ ವಿಸ್ತೀರ್ಣದ 'ಜೌಗು ಪ್ರದೇಶ'ವನ್ನು ಅಭಿವೃದ್ಧಿಪಡಿಸಿದ್ದು, ಈ ಮೂಲಕ ತ್ಯಾಜ್ಯ ನೀರು ಕೆರೆ ಸೇರುವುದಕ್ಕೂ ಮೊದಲು ಅದನ್ನು ಸಂಸ್ಕರಿಸವ ಕೆಲಸವನ್ನು ಮಾಡಲು ಮುಂದಾಗಿದೆ.
ಪ್ರಸ್ತುತ ಅಭಿವೃದ್ಧಿಪಡಿಸಿರುವ ಈ ಜೌಗು ಪ್ರದೇಶವು ಪ್ರತಿ ನಿತ್ಯ ಸುಮಾರು 7 ಮಿಲಿಯನ್ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೌಗು ಪ್ರದೇಶ ಸೇರಿದಂತೆ 163 ಎಕರೆ ವಿಸ್ತೀರ್ಣದ ಕೆರೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶದಲ್ಲಿತ್ತು. 2015 ರಲ್ಲಿ ಕೆರೆಯನ್ನು ಬಿಬಿಎಂಪಿಗೆ ವರ್ಗಾಯಿಸಲಾಯಿತು. ಆದಾಗ್ಯೂ, 30 ಎಕರೆ ಕೆರೆ ಪ್ರದೇಶವನ್ನು ಅತಿಕ್ರಮಿಸಿ ತೆಂಗಿನ ಮರಗಳನ್ನು ನೆಡಲಾಗಿತ್ತು.. ನಂತರ ಈ 30 ಎಕರೆಗಳನ್ನು ಮರಳಿ ಪಡೆದು, ಬೇಲಿ ಹಾಕಲಾಯಿತು.
ಕೆರೆ ಬಳಿ ಯಾವುದೇ ಜೌಗು ಪ್ರದೇಶವಿಲ್ಲದ ಕಾರಣ, 10 ಎಕರೆ ಭೂಮಿಯಲ್ಲಿ ಕೃತಕ ಜೌಗು ಪ್ರದೇಶವನ್ನು ಅಭಿವೃದ್ಧಿಪಡಿಸಲಾಯಿತು. ಆರು ತಿಂಗಳ ಹಿಂದೆ ಕೆಸರು ತೆಗೆದು ಜೌಗು ಪ್ರದೇಶವನ್ನು ಆಳಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಜೌಗು ಪ್ರದೇಶವು ಘನವಸ್ತುಗಳನ್ನು ಹಿಡಿದಿಟ್ಟುಕೊಂಡು, ಪೊಟ್ಯಾಸಿಯಮ್ ಮತ್ತು ಸಾರಜನಕ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೆರೆಯಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಯೋಜನೆಗೆ 5 ಕೋಟಿ ರೂಪಾಯಿ ವೆಚ್ಚಾಗಿದೆ. ಕೆರೆಗೆ ನೀರು ಹರಿಯುವುದನ್ನು ಸುಧಾರಿಸಲು ಮುಂದಿನ ದಿನಗಳಲ್ಲಿ ಹೆಚ್ಚಿನ ಸಸ್ಯಗಳನ್ನು ಜೌಗು ಪ್ರದೇಶಕ್ಕೆ ಸೇರಿಸಲಾಗುವುದು ಎಂದು ಅಧಿಕಾರಿಯೊಬ್ಬರು ನೀಡಿದ್ದಾರೆ.
Advertisement