
ಬೆಂಗಳೂರು: ತಮ್ಮನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಸಹೋದರಿಯರಿಬ್ಬರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಉದಯನಗರದ ಜೂಡ್ ಚರ್ಚ್ ಬಳಿ ಶನಿವಾರ ನಡೆದಿದೆ.
ಗರ್ಭಿಣಿ ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಔಷಧಿ ಖರೀದಿಗೆಂದು ಹೊರ ಹೋದಾಗ ರಾತ್ರಿ 10-10.15ರ ಸುಮಾರಿಗೆ ಘಟನೆ ನಡೆದಿದೆ.
ರಸ್ತೆ ಕಿರಿದಾಗಿದ್ದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಮಹಿಳೆಯ ಸಹೋದರಿ ವಾಹನ ಚಲಾಯಿಸುತ್ತಿದ್ದರು. ಈ ವೇಲಳೆ ಆರೋಪಿ ಗರ್ಭಿಣಿ ಮಹಿಳೆಯನ್ನು ಅನುಚಿತವಾಗಿ ಮುಟ್ಟಿದ್ದಾನೆ. ಇದನ್ನು ಪ್ರಶ್ನಿಸಲು ಹೋದ ಇಬ್ಬರಿಗೂ ನಿಂದಿಸಿದ್ದು, ಆಕೆಯ ಸಹೋದರಿಗೆ ಕಪಾಳಕ್ಕೆ ಹಲವು ಬಾರಿ ಹೊಡೆದಿದ್ದಾನೆ. ಈ ವೇಳೆ ರಕ್ಷಣೆಗೆ ಸ್ಥಳೀಯರು ಧಾವಿಸಿದಾಗ, ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಮಹಿಳೆ ಆರೋಪಿಯ ಬೆನ್ನಟ್ಟಿ, ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ, ವಶಕ್ಕೆ ನೀಡಿದ್ದಾರೆ.
ಆರೋಪಿಯನ್ನು ಉದಯನಗರ ನಿವಾಸಿ ಎಂ.ಸತೀಶ್ (45) ಎಂದು ಗುರ್ತಿಸಲಾಗಿದೆ. ಈತ ರಾಸಾಯನಿಕ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ರಾತ್ರಿ 11.10ರ ಸುಮಾರಿಗೆ ದೂರು ದಾಖಲಿಸಲಾಗಿದೆ. ಗರ್ಭಿಣಿ ಮಹಿಳೆ ದೂರು ದಾಖಲಿಸಿದ್ದು, ಇಬ್ಬರೂ ಸಹೋದರಿಯರೂ ಕೂಡ ಅದೇ ಪ್ರದೇಶ ನಿವಾಸಿಗಳಾಗಿದ್ದಾರೆ. ಆರೋಪಿ ಮಹಿಳೆಯ ಬೆನ್ನಿಗೆ ತೀವ್ರವಾಗಿ ಹೊಡೆದಿದ್ದ ಎಂದು ದೂರುದಾರರು ಆರೋಪಿಸಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಂಬಂಧ ಆರೋಪಿ ವಿರುದ್ಧ ಮಹಿಳೆಯ ಮಾನಹಾನಿ ಮಾಡುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ (ಬಿಎನ್ಎಸ್ 74), ನೋವುಂಟುಮಾಡುವ (ಬಿಎನ್ಎಸ್ 115(2)) ಮತ್ತು ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಬಿಎನ್ಎಸ್ 352) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement