ಪೊಲೀಸರ ಬಲ ಹೆಚ್ಚಿಸಲು ಅಗತ್ಯ ಬೆಂಬಲಕ್ಕೆ ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

ರಾಜ್ಯದ ಅಭಿವೃದ್ಧಿಯು ಪೊಲೀಸರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ನೇರ ಸಂಬಂಧವಿದೆ. ಈ ದಿಸೆಯಲ್ಲಿ ಪೊಲೀಸರು ಶ್ರಮಿಸುತ್ತಿರುವುದು ಅಭಿನಂದನೀಯ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೊಲೀಸ್ ಬಲ ಹೆಚ್ಚಿಸಲು ಅಗತ್ಯವಿರುವ ಎಲ್ಲಾ ಬೆಂಬಲ ನೀಡಲು ಸರ್ಕಾರ ಸಿದ್ಧವಿದೆ ಎಂದು ಬುಧವಾರ ಹೇಳಿದರು.

ಕೋರಮಂಗಲದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಬಿಎಂಆರ್‌ಸಿಎಲ್ ನಿರ್ಮಿಸಿದ ಕೆಎಸ್‌ಆರ್‌ಪಿ ಸಮುದಾಯ ಭವನವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಿಂಸೆ ಹಾಗೂ ಪ್ರಚೋದನೆಗಳನ್ನು ತಡೆದರೆ ಸಮಾಜದ ಒಳಿತು ಸಾಧ್ಯ. ಸಮಾಜದ ಶಾಂತಿ ಸುವ್ಯವಸ್ಥೆ, ಜನರ ಆಸ್ತಿ, ಮಾನ, ಪ್ರಾಣಗಳನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಪ್ರದೇಶ ಸುರಕ್ಷಿತವಾಗಿದ್ದಲ್ಲಿ, ಅಲ್ಲಿನ ಪೊಲೀಸರ ಶ್ರಮವಿರುತ್ತದೆ. ರಾಜ್ಯದಲ್ಲಿ ಏಳು ಕೋಟಿ ಜನರ ರಕ್ಷಣೆಗೆ ಪೊಲೀಸರು ಬದ್ಧತೆ ತೋರುತ್ತಾರೆ. ರಾಜ್ಯದಲ್ಲಿ 2023ಕ್ಕೆ ಹೋಲಿಸದರೆ 2024 ರಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಯು ಪೊಲೀಸರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ನೇರ ಸಂಬಂಧವಿದೆ. ಈ ದಿಸೆಯಲ್ಲಿ ಪೊಲೀಸರು ಶ್ರಮಿಸುತ್ತಿರುವುದು ಅಭಿನಂದನೀಯ. ರಾಜ್ಯದಲ್ಲಿ ಅಪರಾಧಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆಗೊಳಿಸುವತ್ತ ಪೊಲೀಸರು ಹೆಚ್ಚಿನ ಗಮನ ನೀಡಬೇಕು. ಸಮಾಜದಲ್ಲಿ ಅಶಾಂತಿ, ಹಿಂಸೆ, ಕ್ರೌರ್ಯ, ದ್ವೇಷಪೂರಿತ ಭಾಷಣದಿಂದ ಪ್ರಚೋದನೆಗಳು ಹೆಚ್ಚುತ್ತಿರುವುದನ್ನು ಕಾಣಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಹಿಂಸೆ, ದ್ವೇಷವನ್ನು ಪ್ರಚೋದಿಸುವುದನ್ನು ತಡೆದಾಗ ಮಾತ್ರ ಸಮಾಜದ ಒಳಿತು ಸಾಧ್ಯವಾಗುತ್ತದೆ.

ಉತ್ತಮ ಅಧಿಕಾರಿಗಳಿದ್ದಲ್ಲಿ ಅಂತಹ ಕಡೆ ಅಪರಾಧಗಳು ಕಡಿಮೆಯಿರುವುದು ಗಮನಾರ್ಹ. ನಿಷ್ಠಾವಂತ ಅಧಿಕಾರಿಗಳಿಗೆ ಅಪರಾಧ ತಡೆಗಟ್ಟುವುದು ಕಷ್ಟದ ಕೆಲಸವಲ್ಲ. ಹಿರಿಯ ಅಧಿಕಾರಿಗಳು ಕೆಳ ಮಟ್ಟದ ಪೊಲೀಸ್ ಅಧಿಕಾರಿಗಳ ಜೊತೆಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡು ಕೆಲಸ ಮಾಡುವುದು ಒಳ್ಳೆಯದು. ಹಿರಿಯ ಅಧಿಕಾರಿಗಳು ಆಗಾಗ್ಗೆ ಪೋಲೀಸ್ ಠಾಣೆಗೆ ಭೇಟಿ ನೀಡಬೇಕು. ಇತರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ಶ್ರೇಣಿ ವ್ಯವಸ್ಥೆ ಹೆಚ್ಚಿದೆ. ಶಿಸ್ತು ಕೂಡ ಹೆಚ್ಚಿದೆ. ನೀವು ಮನಸ್ಸು ಮಾಡಿದರೆ ಅಪರಾಧಗಳು ತಾನಾಗಿಯೇ ಕಡಿಮೆಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

CM Siddaramaiah
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ OBC ಮೊದಲ ಸಭೆ: ಮತದಾರರ ಮನವೊಲಿಸುವ ರಾಹುಲ್ ಯೋಜನೆಗೆ ಸಮಿತಿ ಬೆಂಬಲ

ಕೋಮುಗಲಭೆಗಳು ಆಗಾಗ್ಗೆ ನಡೆಯುತ್ತಲೇ ಇರುವುದರಿಂದ ಕರಾವಳಿಯಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಕೋಮುಗಲಭೆಗಳನ್ನು ಹತ್ತಿಕ್ಕುವುದು ಅಗತ್ಯವಾಗಿ ಆಗಬೇಕಿದೆ. ಕೋಮುಗಲಭೆಗಳು ನಡೆಯಬಾರದು. ಅದು ಪ್ರಾರಂಭವಾದರೆ ನಿರಂತರವಾಗಿ ನಡೆಯುತ್ತವೆ. ಅದಕ್ಕಾಗಿ ಪ್ರಾರಂಭದಲ್ಲಿಯೇ ಕೋಮುಗಲಭೆಗಳನ್ನು ತಡೆಯಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

ಇತ್ತೀಚೆಗೆ ನಡೆದ ಪೊಲೀಸ್ ಸಮ್ಮೇಳನದಲ್ಲಿಯೂ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. 2023 ಕ್ಕೆ ಹೋಲಿಸಿದರೆ ಸೈಬರ್ ಅಪರಾಧಗಳು 2024 ರಲ್ಲಿ ಹೆಚ್ಚಾಗಿವೆ. ಕೊಲೆ, ದರೋಡೆ, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಮಾದಕ ವಸ್ತುಗಳಿಂದ ನಮ್ಮ ಯುವ ಪೀಳಿಗೆ ಹಾಳಾದರೆ ಭವಿಷ್ಯ ಹಾಳಾಗುತ್ತದೆ. ಪೊಲೀಸರನ್ನು ಕಂಡರೆ ನಾಗರಿಕರಿಗೆ ಭಯ ಹಾಗೂ ಸ್ನೇಹ ಎರಡೂ ಇರಬೇಕು. ಪೋಲಿಸ್ ಠಾಣೆಗಳು ಜನಸ್ನೇಹಿಯಾಗಿರಬೇಕು. ನಾಗರಿಕರೊಂದಿಗೆ ಒಡನಾಟವಿಟ್ಟುಕೊಂಡು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು, ಆಗ ಪರಿಹಾರಗಳು ಹೊಳೆಯುತ್ತವೆ. ಮಾದಕವಸ್ತುಗಳನ್ನು ಸಂಪೂರ್ಣ ನಿರ್ನಾಮ ಮಾಡಬೇಕು. ಸೈಬರ್ ಅಪರಾಧಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಕು ಎಂದರು.

ಪೊಲೀಸ್ ಸಮುದಾಯ ಭವನ ಸುಸಜ್ಜಿತವಾಗಿದ್ದು ನಿರ್ವಹಣೆಗೆ ಅಗತ್ಯವಿರುವಷ್ಟು ಆದಾಯ ಬರುವಂತೆ ಮಾಡಿಕೊಳ್ಳಬೇಕು. ಖಾಸಗಿಯವರಿಗೆ ಸ್ವಲ್ಪ ಹೆಚ್ಚಿನ ದರದಲ್ಲಿಯೇ ನೀಡಿದರೂ ಪೊಲೀಸ್ ಪೇದೆಗಳು ಹಾಗೂ ಸಹಾಯಕ ಪೊಲೀಸ್ ನಿರೀಕ್ಷಕರಿಗೆ ಕಡಿಮೆ ದರದಲ್ಲಿ ಅಥವಾ ನಿರ್ವಹಣಾ ವೆಚ್ಚ ಪಡೆದು ಸಮುದಾಯ ಭವನವನ್ನು ಒದಗಿಸುವಂತೆ ಸಲಹೆ ನೀಡುತ್ತಿದ್ದೇನೆ. ಪೊಲೀಸ್ ಪೇದೆಗಳು ಅಪರಾಧಗಳನ್ನು ಕಡಿಮೆ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಾರೆ. ಪೇದೆಗಳು ಹಾಕುವ ಟೋಪಿಗಳ ಬದಲಿಗೆ ಪಿ ಕ್ಯಾಪ್ ಒದಗಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಪೊಲೀಸ್ ವೈದ್ಯಕೀಯ ತಪಾಸಣಾ ವೆಚ್ಚವನ್ನು ಒಂದೂವರೆ ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯ ಬಿದ್ದರೆ ಹೆಚ್ಚಿಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com