
ಬೆಂಗಳೂರು: ನಾಗವಾರದ ಮಾರುಕಟ್ಟೆ ಪ್ರದೇಶದಲ್ಲಿ ಶಾಪಿಂಗ್ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಜುಲೈ 11 ರಂದು ಸಂಜೆ 7.45 ರಿಂದ 8 ಗಂಟೆಯ ನಡುವೆ ಘಟನೆ ನಡೆದಿದೆ. ವಿದ್ಯಾರ್ಥಿನಿ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಯುವಕ ಎಳೆದು ಅಪ್ಪಿಕೊಂಡಿದ್ದು, ಲೈಂಗಿಕ ಕಿರುಕುಳ ನೀಡಿದ್ದಾನೆಂದು ತಿಳಿದುಬಂದಿದೆ.
ಈ ಸಂಬಂಧ ಯುವತಿಯ ತಾಯಿ ಮರುದಿನ ಗೋವಿಂದಪುರ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಯುವಕನನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಯುವಕನನ್ನು ಗೋವಿಂದಪುರ ಮುಖ್ಯ ರಸ್ತೆಯ ನಿವಾಸಿ ಮೊಹಮ್ಮದ್ ಮಾರೂಫ್ ಶೆರಿಫ್ ಎಂದು ಗುರ್ತಿಸಲಾಗಿದೆ.
ಯುವತಿ ತನ್ನ ಸ್ಕೂಟರ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ರಸ್ತೆ ದಾಟಲು ಕಾಯುತ್ತಿದ್ದಾಗ ಆರೋಪಿ ಆಕೆಯ ಬಳಿಗೆ ಬಂದು ಬಲವಂತವಾಗಿ ಮುತ್ತಿಟ್ಟಿದ್ದಾನೆಂದು ತಿಳಿದುಬಂದಿದೆ.
ಆಕೆಯನ್ನು ಅನುಚಿತವಾಗಿ ಮುಟ್ಟಿದ ಆರೋಪವೂ ಅವನ ಮೇಲಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ (ಬಿಎನ್‌ಎಸ್ 75), ಕಿರುಕುಳ (ಬಿಎನ್‌ಎಸ್ 78) ಮತ್ತು ಮಹಿಳೆಯ ನಮ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ (ಬಿಎನ್‌ಎಸ್ 74) ಪ್ರಕರಣ ದಾಖಲಿಸಲಾಗಿದೆ.
Advertisement