
ಬೆಂಗಳೂರು: ಡೆಂಗ್ಯೂ ನಿಯಂತ್ರಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ನಿರಂತರ ಪ್ರಯತ್ನಗಳು ಫಲ ನೀಡಿವೆ,
ಜನವರಿ 1 ರಿಂದ ಜುಲೈ 23 ರವರೆಗೆ ನಗರದಲ್ಲಿ ಕೇವಲ 1,676 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 7,280 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು.
ಡೆಂಗ್ಯೂ ಪ್ರಕರಣಗಳ ಸಂಖ್ಯೆಯನ್ನು ನಿಗ್ರಹಿಸಲು ಆರೋಗ್ಯ ಅಧಿಕಾರಿಗಳು ಹೆಚ್ಚಿನ ಜಾಗರೂಕತೆ ವಹಿಸಿದ್ದು, ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣಗಳಲ್ಲಿ ಶೇಕಡಾ 75ರಷ್ಟು ಇಳಿಕೆ ಕಂಡುಬಂದಿದೆ. ಇದಲ್ಲದೆ, ಡೆಂಗ್ಯೂವಿನಿಂದಾಗಿ ಯಾವುದೇ ಸಾವುಗಳೂ ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.
ಅಂಕಿ ಅಂಶಗಳ ಪ್ರಕಾರ, 2022 ರಲ್ಲಿ 2,313 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದಾರೆ. 2023 ರಲ್ಲಿ ನಾಲ್ಕು ಸಾವುಗಳೊಂದಿಗೆ 8,609 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು.2024 ರಲ್ಲಿ (ಡಿಸೆಂಬರ್ ಮೊದಲ ವಾರದವರೆಗೆ), ಸಕಾರಾತ್ಮಕ ಪ್ರಕರಣಗಳು ಬಹುತೇಕ ದ್ವಿಗುಣಗೊಂಡಿದ್ದವು. ಇದಲ್ಲದೆ, ಮೂರು ಸಾವುಗಳೊಂದಿಗೆ 14,950 ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ಪ್ರಕರಣಗಳನ್ನು ಕಡಿಮೆ ಮಾಡಲು ಬಿಬಿಎಂಪಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು.
ಈ ಕುರಿತು ವಿವರಗಳನ್ನು ಹಂಚಿಕೊಂಡ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು, "ಈ ವರ್ಷ ಡೆಂಗ್ಯೂ ಹೆಚ್ಚಳವನ್ನು ನಿಯಂತ್ರಿಸಲು ಪಾಲಿಕೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮಲ್ಲಿ ಡೆಂಗ್ಯೂ ಪ್ರಕರಣಗಳಿದ್ದರೂ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಡೆಂಗ್ಯೂ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ. ನಮ್ಮ ಆರೋಗ್ಯ ಅಧಿಕಾರಿಗಳನ್ನು ಜಾಗೃತಿ ವಹಿಸಿದ್ದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸೋಂಕು ಹರಡುವಿಕೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ಜಾಗೃತಿ ಅಭಿಯಾನಗಳ ಜೊತೆಗೆ, ಬಿಬಿಎಂಪಿ ನೀರು ಸಂಗ್ರಹವಾಗುವ ಎಲ್ಲಾ ಪ್ರದೇಶಗಳನ್ನು ಗುರುತಿಸಲು ಕ್ರಮಗಳನ್ನು ಕೈಗೊಂಡಿದೆ. ಡೆಂಗ್ಯೂ ಸಂತಾನೋತ್ಪತ್ತಿಗೆ ಉತ್ತಮ ಸ್ಥಳವಾಗಿರುವ ತಗ್ಗು ಪ್ರದೇಶಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ಸಿಂಪಡಣೆಯನ್ನು ತೀವ್ರಗೊಳಿಸಲಾಗಿದೆ. ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸುವ ಸಿಂಪಡಣೆ ಮಾತ್ರವಲ್ಲದೆ, ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಡೆಂಗ್ಯೂ ಲಾರ್ವಾ ಮೂಲದ ಕಡಿತದ ಬಗ್ಗೆ ವಿದ್ಯಾರ್ಥಿಗಳು ಮತ್ತು ಜನರಿಗೆ ಶಿಕ್ಷಣ ನೀಡುತ್ತಿದ್ದೇವೆಂದು ತಿಳಿಸಿದ್ದಾರೆ.
Advertisement